ಬಿತ್ತನೆ ಬೀಜ-ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ

district koppal agreculture training zp ceo
Published on

ಕೊಪ್ಪಳ: ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಕೊರತೆ ಆಗದಂತೆ ಕ್ರಮವಹಿಸಲು ಜಿಪಂ ಸಿಇಒ ವರ್ಣಿತ್​ ನೇಗಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮುಂಗಾರು ಪೂರ್ಣಗೊಂಡಿದೆ. ಹಿಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಿ. ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿ. ರೈತರಿಗೆ ಸಕಾಲದಲ್ಲಿ ಪೂರೈಸಿ. ಯೂರಿಯಾ ಇತರ ರಸಗೊಬ್ಬರ, ಕೀಟನಾಶಕ ಬೇಡಿಕೆಯಷ್ಟು ಪೂರೈಸಿ. ಯಾವುದೇ ತೊಂದರೆಗಳಾಗದಂತೆ ಎಚ್ಚರವಹಿಸಿ. ಹೋಬಳಿ ಮಟ್ಟದಲ್ಲಿ ಬೀಜೋಪಚಾರ ಆಂದೋಲನ ಕೈಗೊಳ್ಳಿ. ಪ್ರತಿ ತಿಂಗಳು ಕೀಟನಾಶಕ, ರಸಗೊಬ್ಬರ ಗುಣಮಟ್ಟ ಪರೀೆ ನಡೆಸಿ. ಆತ್ಮ, ಕೃಷಿ ಸಂಜೀವಿನಿ ಹಾಗೂ ಕೃಷಿ ಸಖಿ ಮತ್ತು ಪಶು ಸಖಿಯರ ಸಹಾಯದಿಂದ ರೈತರಿಗೆ ಅಗತ್ಯ ಮಾಹಿತಿ ಒದಗಿಸುವಂತೆ ನಿರ್ದೇಶಿಸಿದರು.

ಜಂಟಿ ಕೃಷಿ ನಿದೇಶಕ ರುದ್ರೇಶಪ್ಪ ಟಿ.ಎಸ್​.ಮಾತನಾಡಿ, ಹಿಂಗಾರಿನಲ್ಲಿ 1,80,725 ಹೆಕ್ಟೇರ್​ ಪ್ರದೇಶ ಬಿತ್ತನೆ ಗುರಿ ಇದೆ. 93,602.63 ಕ್ವಿಂಟಲ್​ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. 37,764 ಕ್ವಿಂಟಲ್​ ಇದ್ದು, ಕಳೆದ ವರ್ಷ 28 ಸಾವಿರ ಕ್ವಿಂಟಲ್​ ವಿತರಣೆ ಮಾಡಲಾಗಿದೆ. ಕಡಲೆ (18,325 ಕ್ವಿಂ.), ಜೋಳ (208 ಕ್ವಿಂ.), ಮೆಕ್ಕೆಜೋಳ (68 ಕ್ವಿಂ.), ಶೇಂಗಾ (8616 ಕ್ವಿಂ.), ಸೂರ್ಯಕಾಂತಿ (4 ಕ್ವಿಂ.), ಕುಸುಬೆ (6 ಕ್ವಿಂ.) ಹಾಗೂ ಗೋದಿ (13.78 ಕ್ವಿಂ.) ವಿತರಣೆ ಗುರಿ ಹೊಂದಲಾಗಿದೆ. 20 ರೈತ ಸಂಪರ್ಕ ಕೇಂದ್ರ, 8 ಹೆಚ್ಚುವರಿ ಕೇಂದ್ರಗಳ ಮೂಲಕ ಅ.1ರಿಂದ ವಿತರಿಸಲಾಗುವುದು. ಬಿತ್ತನೆ ಬೀಜದ ಕೊರತೆ ಇಲ್ಲವೆಂದು ತಿಳಿಸಿದರು.

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ವಿ.ರವಿ, ಗಂಗಾವತಿ ಕೆವಿಕೆ ಮುಖ್ಯಸ್ಥ ಡಾ.ರಾವೇಂದ್ರ ಯಲಿಗಾರ, ಮುನಿರಾಬಾದ್​ ತೋಟಗಾರಿಕೆ ಮಹಾವಿದ್ಯಾಲಯ ವಿಸ್ತರಣಾ ಮುಂದಾಳು ಡಾ.ಮೌಲಾಸಾಬ್​, ಉಪ ಕೃಷಿ ನಿರ್ದೇಶಕ ಎಲ್​.ಸಿದ್ದೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net