

ಕೊಪ್ಪಳ: ವೃತ್ತಿ ಬುನಾದಿ ತರಬೇತಿ ಅವಧಿಯಲ್ಲಿ ಕಲಿಯುವ ಕೆಲಸವನ್ನು ಶ್ರದ್ಧೆಯಿಂದ ಕಲಿಯಿರಿ. ತರಬೇತಿ ಅವಧಿ ಸದ್ಬಳಕೆ ಮಾಡಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸಲಹೆ ನೀಡಿದರು.
ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಲಿಪಿಕ ಸಿಬ್ಬಂದಿಗೆ ಹಮ್ಮಿಕೊಂಡಿದ್ದ 42 ದಿನಗಳ ಸಾಮಾನ್ಯ ಬುನಾದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೃತ್ತಿ ಬದುಕಿನಲ್ಲಿ ಉತ್ತಮ ಆಡಳಿತ ನಡೆಸಲು ನಿಮ್ಮ ವೃತ್ತಿ ಬಗ್ಗೆ ಅರಿವಿರಬೇಕು. ಮಾಡುವ ಕೆಸಲದ ಬಗ್ಗೆ ಚೆನ್ನಾಗಿ ತಿಳಿದಿರಬೇಕು. ಸರ್ಕಾರದ ಮಾರ್ಗಸೂಚಿ, ನಿಯಮಗಳ ಬಗ್ಗೆ ಜ್ಞಾನವಿರಬೇಕು. ಕಡತಕ್ಕೆ ಸಹಿ ಮಾಡುವ ಮುನ್ನ ಚೆನ್ನಾಗಿ ಓದಿ ವಿಷಯ ಅರಿಯಿರಿ. ಗೊತ್ತಿಲ್ಲದ ವಿಷಯ ಬಗ್ಗೆ ಮೇಲಧಿಕಾರಿಗಳು ಅಥವಾ ಹಿರಿಯರಿಂದ ಮಾಹಿತಿ ಪಡೆಯಿರಿ. 42 ದಿನದ ತರಬೇತಿಯಲ್ಲಿ ನಿಮ್ಮ ಇಲಾಖೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಪಡೆಯುಂತೆ ತಿಳಿಸಿದರು.
ಹಿಂದೆ ವೃತ್ತಿ ತರಬೇತಿ ಇರುತ್ತಿರಲಿಲ್ಲ. ನೇರವಾಗಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಈಗ ನಿಮಗೆಲ್ಲ ಕೆಲಸ ಮಾಡುವ ಬಗ್ಗೆ ತರಬೇತಿ ದೊರೆಯುತ್ತಿದೆ. ನೀವೆಲ್ಲ ಪುಣ್ಯವಂತರು. ತರಬೇತಿ ಲಾಭ ಪಡೆಯಿರಿ. ಜಿಲ್ಲಾ ತರಬೇತಿ ಸಂಸ್ಥೆ ಹಮ್ಮಿಕೊಳ್ಳುವ ವೃತ್ತಿ ತರಬೇತಿಗೆ ಕೆಲ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಕಳಿಸುತ್ತಿರಲಿಲ್ಲ. ಕಡ್ಡಾಯವಾಗಿ ಕಳಿಸುವಂತೆ ಸೂಚಿಸಲಾಗಿದೆ. ವೃತ್ತಿಗೆ ತರಬೇತಿ ಅವಶ್ಯ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ ಮಾತನಾಡಿ, ವೃತ್ತಿ ಜೀವನ ಮುಗಿವವರೆಗೂ ತರಬೇತಿ ಅವಶ್ಯ. ಕೌಶಲ ಅಳವಡಿಸಿಕೊಂಡಲ್ಲಿ ಬಹುಬೇಗ ಮುಂದೆ ಬರುತ್ತೇವೆ. ಎಲ್ಲದಕ್ಕೂ ಮುನ್ನ ಬೇಸಿಕ್ ಕೆಲಸ ಬರಬೇಕು. ಇಲ್ಲದಿದ್ದರೆ ಎಷ್ಟೇ ತರಬೇತಿ ಪಡೆದರೂ ಪ್ರಯೋಜನವಿಲ್ಲ. ಪ್ರಶಿಾರ್ಥಿಗಳಿಗೆ ಬುನಾದಿ ತರಬೇತಿ ಅವಶ್ಯವಿದೆ ಎಂದರು.
ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಇತ್ತೀಚೆಗೆ ನೇಮಕಗೊಂಡ ಗ್ರೂಪ್ ಸಿ ಲಿಪಿಕ ಸಿಬ್ಬಂದಿಗೆ 42 ದಿನಗಳ ವೃತ್ತಿ ಬುನಾದಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ನೌಕರರು ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಹೇಗೆ ಮಾಡಬೇಕು, ಅಧಿಕಾರಿಗಳೊಂದಿಗೆ ಕೆಲಸ ಮಾಡುವ ಬಗೆ, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಒದಗಿಸಲಾಗುವದು. ಕಲಿಕೆ ಎಂಬುದು ಹುಟ್ಟಿನಿಂದ ಸಾಯುವವರೆಗೆ ಇರಲಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಮೈಲಾರರಾವ್ ಕುಲಕರ್ಣಿ, ಲಾಯಕ್ ಅಲಿ, ಎಂ.ಗುರುರಾಜ, ಗ್ರೇಡ್&2 ತಹಸೀಲ್ದಾರ್ ಗವಿಸಿದ್ದಪ್ಪ ಮಣ್ಣೂರು, ವಾರ್ತಾಧಿಕಾರಿ ಡಾ.ಜಿ.ಸುರೇಶ, ಬೋಧಕರಾದ ಶ್ರೀಧರ್, ನರ್ಮದಾ ಇದ್ದರು.