

ಕೊಪ್ಪಳ: ತಾಲೂಕಿನ ವನಬಳ್ಳಾರಿ ಬಳಿ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಎಎಸ್ಐ ಮೃತಪಟ್ಟಿದ್ದು, ವಾಹನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಹೈವೆ ಪೆಟ್ರೋಲಿಂಗ್ ವಿಭಾಗದ ಎಎಸ್ಐ ರಾಮಣ್ಣ ಉಪ್ಪಾರ (55) ಮೃತ. ಕೊಪ್ಪಳ ತಾಲೂಕಿನ ವನಬಳ್ಳಾರಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕರ್ತವ್ಯದಲ್ಲಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೋಗಿದೆ. ಡಿಕ್ಕಿಯಾದ ರಭಸಕ್ಕೆ ತಲೆ ಭಾಗ ನುಜ್ಜುಗುಜ್ಜಾಗಿದೆ. ರಾಮಣ್ಣ ರಾತ್ರಿ ಪಾಳಯ ಕರ್ತವ್ಯದಲ್ಲಿದ್ದರು. ಶುಕ್ರವಾರ ಬೆಳಗ್ಗೆ 3 ಗಂಟೆಗೆ ಅಪಘಾತ ನಡೆದಿದೆ. ಗುದ್ದಿದ ವಾಹನ ಯಾವುದೆಂದು ಪತ್ತೆಯಾಗಿಲ್ಲ. ಹೆದ್ದಾರಿ ಅಕ್ಕಪಕ್ಕದಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಲಿ ಹಾಗೂ ಅನುಮಾನಾಸ್ಪದ ವಾಹನಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿಷಯ ತಿಳಿದು ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.