ಅಪಘಾತದಲ್ಲಿ ಹುಲಿಗೆಮ್ಮ ಭಕ್ತ ಸಾವು, ಎರಡು ಗಂಟೆಯಲ್ಲಿ ಆರೋಪಿಗಳ ಬಂಧನ

Published on

ಕೊಪ್ಪಳ: ಹುಣ್ಣಿಮೆ ಅಂಗವಾಗಿ ಗುರುವಾರ ಕೊಪ್ಪಳದಿಂದ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದರ್ಶನಕ್ಕೆ ಪಾದಯಾತ್ರೆಯಲ್ಲಿ ತೆರಳಿದ್ದ ಭಕ್ತನಿಗೆ ಮಿನಿ ಬಸ್​ ಗುದ್ದಿ ಮೃತಪಟ್ಟಿದ್ದಾನೆ. ಅಪಘಾತ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪ್ರಕರಣ ದಾಖಲಾದ ಕೇವಲ ಎರಡು ಗಂಟೆಯಲ್ಲಿಯೇ ಪೊಲೀಸರು ಬಂಧನ ಮಾಡಿದ್ದಾರೆ.

ಕೊಪ್ಪಳದ ಸಮಗಾರ ಓಣಿ ನಿವಾಸಿ ಗುರುರಾಜ ಅರಕೇರಿ (28) ಮೃತ ದುರ್ದೈವಿ. ಗುರುರಾಜ ಹಾಗೂ ಈತನ ಸಹೋದರ ಗಣೇಶ ಇಬ್ಬರು ಹುಣ್ಣಿಮೆ ಅಂಗವಾಗಿ ಕೊಪ್ಪಳದಿಂದ ಹುಲಿಗಿಗೆ ಪಾದಯಾತ್ರೆ ಆರಂಭಿಸಿದ್ದರು. ಕೊಪ್ಪಳ&ಹೊಸಪೇಟೆ ರಸ್ತೆಯ ಬಸಾಪುರ ದಿಬ್ಬದ ಹತ್ತಿರ ತೆರಳುವಾಗ ಯಮರೂಪಿಯಾಗಿ ಬಂದ ಮಿನಿಬಸ್​ ಗುರುರಾಜನಿಗೆ ಡಿಕ್ಕಿ ಹೊಡೆದಿದೆ. ವಾಹನ ನಿಲ್ಲಿಸದೇ ಚಾಲಕ ಪರಾರಿಯಾಗಿದ್ದಾನೆ. ಗುರುರಾಜ ಕುತ್ತಿಗೆ ಹಾಗೂ ಕೈಗೆ ಬಲವಾಗಿ ಪೆಟ್ಟು ಬಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಲಕಾರಿಯಾಗದೇ ಮೃತಪಟ್ಟಿದ್ದಾನೆ.

ಅಪಘಾತ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೇವಲ ಎರಡು ಗಂಟೆಯಲ್ಲಿ ಅಪಘಾತ ಮಾಡಿದ ವಾಹನ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್​ ತಾಲೂಕಿನ ಹೊಸೂರು ಗ್ರಾಮದ ಶೌಕತ್​ ಎಂಬಾತ ಅಪಘಾತ ಮಾಡಿದಾತ.
ಈತನೂ ಹಾವೇರಿಯಿಂದ ಹುಲಿಗಿಗೆ ತೆರಳುತ್ತಿದ್ದ. ಅಳವಂಡಿ ಪೊಲೀಸ್​ ಠಾಣೆಯ ಎಎಸ್​ಐ ನೀಲಕಂಠ, ಕೊಪ್ಳಳ ಗ್ರಾಮೀಣ ಠಾಣೆಯ ಉಮೇಶ ನಾಯಕ, ಗಂಗಾಧರಪ್ಪ ನಾಯಕ ತಂಡ ಆರೋಪಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net