

ಕೊಪ್ಪಳ: ವಿಪತ್ತು ನಿರ್ವಹಣೆಗೆ ಎಲ್ಲ ಅಧಿಕಾರಿಗಳು ಪೂರ್ವ ಸಿದ್ಧರಾಗಿರಬೇಕು ಎಂದು ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ವಿವಿಧ ಇಲಾಖೆಯ ಎ, ಬಿ ವೃಂದ ಅಧಿಕಾರಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಅಧಿಕಾರಿಗಳು ವಿಕೋಪ ನಿರ್ವಹಣೆ ಕಾಯ್ದೆ ಅರಿಯಬೇಕು. ವಿಪತ್ತು ಸಮಯದಲ್ಲಿ 24*7 ಕೆಲಸ ಮಾಡಬೇಕು. ಎಲ್ಲ ಇಲಾಖೆಯಲ್ಲಿ ವಿಪತ್ತು ನಿರ್ವಹಣೆಗೆ ಬೇಕಾದ ಸಿದ್ಧತೆ ಮಾಡಿಕೊಂಡಿರಬೇಕು. ಜಿಲ್ಲಾ ಕೇಂದ್ರಿತ ವಿಕೋಪ ನಿರ್ವಹಣೆ ಯೋಜನೆ ಪರಿಷ್ಕರಣೆ ಅಗತ್ಯ ಎಂದರು.
ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಜಿಲ್ಲಾ ಕೇಂದ್ರಿತ ವಿಕೋಪ ನಿರ್ವಹಣಾ ಯೋಜನೆ ಕುರಿತು ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳಿಗೆ ಎರಡು ದಿನ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಮೈಸೂರು ವಿಕೋಪ ನಿರ್ವಹಣಾ ಕೇಂದ್ರದ ಬೋಧಕ ಡಾ.ಪರಮೇಶ ಜೆ.ಆರ್.ವಿಕೋಪ ನಿರ್ವಹಣಾ ಯೋಜನೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕೊಪ್ಪಳ ತಹಸೀಲ್ದಾರ್ ವಿಠ್ಠಲ ಚೌಗಲಾ, ಬೋಧಕಿ ನರ್ಮದಾ ಇದ್ದರು.