

ಕೊಪ್ಪಳ: ವಿಶ್ವದ ಇತರ ದೇಶಗಳು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎಂದು ಬಯಸುತ್ತಿವೆ. ಆದರೆ, ನಮ್ಮಲ್ಲಿ ಕೆಲವರಿಗೆ ಮತ್ತೊಮ್ಮೆ ಮೋದಿ ಎಂಬ ಪದ ಅರಗಿಸಿಕೊಳ್ಳಲಾಗುತ್ತಿಲ್ಲ. ಜೆಡಿಎಸ್ ಸೇರಿ ಎನ್ಡಿಎ ಎಲ್ಲ ನಾಯಕರು ಮೋದಿ ನಾಯಕತ್ವ ಸ್ವಾಗತಿಸಿದ್ದಾರೆ ಎಂದು ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ನಿರಂತರವಾಗಿ ದಲಿತರಿಗೆ ಅನ್ಯಾಯ ಮಾಡಿಕೊಂಡು ಬಂದಿದೆ. ಜನಸಂಖ್ಯೆಗೆ ತಕ್ಕಂತೆ ಮೀಸಲು ಪ್ರಮಾಣ ಹೆಚ್ಚಿಸಿದ್ದು ಬಿಜೆಪಿ. ನಮ್ಮ ಒಳ ಮೀಸಲಾತಿ ಹೋರಾಟದೊಂದಿಗೆ ತಾವಿರುವುದಾಗಿ ಮೋದಿ ಭರವಸೆ ನೀಡಿದ್ದಾರೆ. ದಲಿತರೊಂದಿಗೆ ಮೋದಿ ಇದ್ದಾರೆ. ಅವರೊಂದಿಗೆ ದಲಿತರು ಇರಬೇಕು. ಕಾಂಗ್ರೆಸ್ ಆಯ್ಕೆಯಾಗದಿದ್ದಲ್ಲಿ ಗ್ಯಾರಂಟಿ ಯೋಜನೆ ಮುಂದುವರೆಯುವುದಿಲ್ಲ. ಸಿದ್ದರಾಮಯ್ಯ ಸಿಎಂ ಸ್ಥಾನ ಉಳಿಯಲ್ಲವೆಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಈ ಮೂಲಕ ಜನರನ್ನು ಯಾಮಾರಿಸುತ್ತಿದ್ದಾರೆಂದು ದೂರಿದರು.
ಮೋದಿ ಗ್ಯಾರಂಟಿ ಎಲ್ಲ ವರ್ಗಗಳನ್ನು ಒಳಗೊಂಡಿದೆ. ಶೌಚಗೃಹ, ವಸತಿ ಯೋಜನೆ, ಪಿಎಂ ಗರೀಬ್ ಕಲ್ಯಾಣ ಅಡಿ ಪಡಿತರ ವಿತರಣೆ ಎಲ್ಲ ವರ್ಗಕ್ಕೆ ಮುಟ್ಟಿವೆ. ಮುಖ್ಯವಾಗಿ ತಳ ವರ್ಗದವರಿಗೆ ಸಾಕಷ್ಟು ಅನುಕೂಲವಾಗಿದೆ. ದೇಶದ ಶೇ.80ರಷ್ಟು ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಆರಂಭವಾಗಿವೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ವಿಮಾನ ನಿಲ್ದಾಣ ಸೇರಿ ಇತರ ಮೂಲಸೌಕರ್ಯ ಅಭಿವೃದ್ಧಿ ಆಗಿದೆ. ಪಿಎಂ ಕಿಸಾನ್ನಡಿ ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ 4 ಸಾವಿರ ರೂ. ಕಾಂಗ್ರೆಸ್ ನಿಲ್ಲಿಸಿದೆ. ರೈತ, ದಲಿತರ ಮಕ್ಕಳ ಶಿಷ್ಯ ವೇತನ ಬಂದ್ ಆಗಿವೆ. ದಲಿತರ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ. ಹಾಸ್ಟೆಲ್ ಸಿಗದ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಸಹಾಯಧನ ಸ್ಥಗಿತಗೊಂಡಿದೆ ಎಂದು ಟೀಕಿಸಿದರು.
ಸುದೀರ್ವಾಗಿ ದೇಶ ಆಳಿದ ಕಾಂಗ್ರೆಸ್ ತನ್ನ ಅವಧಿಯಲ್ಲಿ ಏನು ಅಭಿವೃದ್ಧಿ ಮಾಡಿದೆ ಎಂಬ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ಅನಗತ್ಯ ವಿಷಯಗಳನ್ನು ಮುನ್ನೆಲೆಗೆ ತಂದು ರಾಜಕೀಯ ಮಾಡುತ್ತಿದ್ದಾರೆ. ನಾವು ಸಂವಿಧಾನ ಬದಲಾಯಿಸುತ್ತೇವೆಂದು ಸುಳ್ಳು ಹೇಳುತ್ತಿದ್ದಾರೆ. ನಿಜವಾಗಿ ಮೀಸಲಾತಿ ಪರ ಇರುವವರು ನಾವು. ಎ.ನಾರಾಯಣ ಸ್ವಾಮಿ. ಕೇಂದ್ರ ಸಚಿವ.
ಎ.ನಾರಾಯಣ ಸ್ವಾಮಿ. ಕೇಂದ್ರ ಸಚಿವ.