

ಕೊಪ್ಪಳ: ಮತಗಟ್ಟೆ ಅಧಿಕಾರಿಗಳು ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಳ್ಳಿ ಎಂದು ಮಾಸ್ಟರ್ ಟೆನರ್ ವಿದ್ಯಾಧರ ಮೇರಾಜ ಹೇಳಿದರು.
ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಪಿಆರ್ಒ, ಎಪಿಆರ್ಒಗಳಿಗೆ ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ನೀಡಿ ಮಾತನಾಡಿದರು.
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಜೂನ್ 3ರಂದು ನಡೆಯಲಿದೆ. ಜಿಲ್ಲೆಯಲ್ಲಿ 24 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನೀವೆಲ್ಲ ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಳ್ಳಬೇಕು. ಮಸ್ಟರಿಂಗ್ ಕಾರ್ಯಗಳಲ್ಲಿ ತಿಳಿಸಿದ ಸಮಯ ಮತ್ತು ಸ್ಥಳದಲ್ಲಿ ಸೇರಬೇಕು. ಮತಪೆಟ್ಟಿಗೆ, ಮತಪತ್ರಗಳನ್ನು ಪಡೆದುಕೊಳ್ಳಿ. ಏಜೆಂಟ್ ನೇಮಕ, ಮತದಾನಕ್ಕೆ ಬೇಕಾಗುವ ಸಾಮಗ್ರಿಗಳ ಬಗ್ಗೆ ಅರಿತುಕೊಳ್ಳಿ.
ಎನಾದರೂ ಗೊಂದಲಗಳಿದ್ದಲ್ಲಿ ಮೇಲಧಿಕಾರಿಗಳಿಂದ ಸಲಹೆ ಪಡೆಯಿರಿ ಎಂದರು.
ಮತಗಟ್ಟೆ ವ್ಯವಸ್ಥೆ, ಮತಪತ್ರ ನಿರ್ವಹಣೆ ಹಾಗೂ ಗ್ರೀನ್ ಪೇಪರ್ ಸೀಲ್ ಅಳವಡಿಕೆ ಬಗ್ಗೆ ಗೊತ್ತಿರಲಿ. ಮತದಾನ ನಡೆಯುವಾಗ ಯಾವುದೇ ಘಟನೆಗಳು ಸಂಭವಿಸಿದಲ್ಲಿ ಕಾಲ ಕಾಲಕ್ಕೆ ಪಿಆರ್ಒ ದಿನಚರಿಯಲ್ಲಿ ದಾಖಲಿಸಿ. ನಿಗದಿತ ಸಮಯಕ್ಕೆ ಮತದಾನ ಪೂರ್ಣಗೊಳಿಸಿ. ಮತದಾನದ ಮುಕ್ತಾಯ ಸಮಯಕ್ಕೆ ಹಾಜರಿದ್ದ ಎಲ್ಲ ಮತದಾರರರಿಗೆ ಮತದಾನಕ್ಕೆ ಅವಕಾಶ ನೀಡಿ. ಮತದಾನ ನಂತರ ಬ್ಯಾಲೆಟ್ ಬಾಕ್ಸ್ ಅನ್ನು ಸೀಲ್ ಮಾಡಿ, ಅರಗು ಮುದ್ರೆ, ವಿಳಾಸ ಚೀಟಿ, ಬಟ್ಟೆಯ ಚೀಲದಲ್ಲಿಟ್ಟು ಹೊಲಿಗೆ ಹಾಕಿ ಅದರ ಮೇಲೂ ವ್ಯಾಕ್ಸ್ ಸೀಲ್, ವಿಳಾಸ ಚೀಟಿ ಹಚ್ಚಿ ಮೊಹರು ಮಾಡಿ.
ಉಮೇದುವಾರ/ಏಜೆಂಟ್ ಬಯಸಿದರೆ ಅವರೂ ಸಹಿ ಮಾಡಬಹುದು. ಚುನಾವಣೆಗೆ ಸಂಬಂಧಿಸಿದ ಎಲ್ಲ ಕಾಗದಗಳನ್ನು ಮೊಹರು ಮಾಡಿ. ನಿಮ್ಮ ಕರ್ತವ್ಯ ನಿಷ್ಪಕ್ಷಪಾತವಾಗಿ ನಿರ್ವಹಿಸಿ ಎಂದು ಸಲಹೆ ನೀಡಿದರು. ಎಡಿಸಿ ಸಾವಿತ್ರಿ ಕಡಿ, ತಹಸೀಲ್ದಾರ್ಗಳು, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಪಿಆರ್ಒ, ಎಪಿಆರ್ಗಳಿದ್ದರು.