

ಕೇಶವಮೂರ್ತಿ ವಿ.ಬಿ. ಹಾವೇರಿ
ಹಣಕಾಸಿನ ಮುಗ್ಗಟ್ಟಿನಿಂದ ಬಸವಳಿದು ವಿವಿಧ ಯೋಜನೆಗಳಿಗೆ ಕತ್ತರಿ ಹಾಕುತ್ತಿರುವ ರಾಜ್ಯ ಸರ್ಕಾರ, ಹಾವೇರಿಯಲ್ಲಿ 2022ರ ಜನವರಿಯಲ್ಲಿ ನಡೆದಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಜಿಲ್ಲಾ ಕನ್ನಡ ಸಾಹಿತ್ಯ ಭವನ’ ನಿರ್ವಣಕ್ಕೆ ಮಂಜೂರು ಮಾಡಿದ್ದ 3 ಕೋಟಿ ರೂ. ಅನುದಾನಕ್ಕೂ ಕೊಕ್ಕೆ ಹಾಕಿದೆ.
ಸಮ್ಮೇಳನದ ಯಶಸ್ಸು ಹಾಗೂ ನೆನಪಿಗಾಗಿ ತವರು ಜಿಲ್ಲೆಗೆ ಜಿಲ್ಲಾ ಸಾಹಿತ್ಯ ಭವನ ನಿರ್ವಣಕ್ಕೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ 3 ಕೋಟಿ ರೂ. ಮಂಜೂರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಪ್ರಸ್ತಾವನೆ ಒಪ್ಪಲಾಗದು ಎಂದು ಕೆಲ ಸಬೂಬು ಹೇಳುತ್ತಿದೆ ಎಂಬ ಆರೋಪ ಕೇಳಿ ಬಂದಿವೆ.
‘ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲಿ ಲೀಸ್ ಮೇಲೆ ನೀಡಿರುವ ನಿವೇಶನದಲ್ಲಿ ಭವನ ನಿರ್ವಣಕ್ಕೆ ಅನುದಾನ ನೀಡುವುದು ಸೂಕ್ತವಲ್ಲ. ಸಾಂಸ್ಕೃತಿಕ ಭವನ, ರಂಗಮಂದಿರ ನಿರ್ವಣಕ್ಕೆ ಅನುದಾನ ನೀಡಲು ಇರುವ ಮಾರ್ಗಸೂಚಿ ಅನುಸಾರ ಸಾಹಿತ್ಯ ಭವನಕ್ಕೆ ಅನುದಾನ ನೀಡಲು ಅವಕಾಶ ಇರುವುದಿಲ್ಲ. ಪ್ರಸ್ತುತ ಇರುವ ಆರ್ಥಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಹಾವೇರಿ ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಾವೇರಿ ನಗರದ ಎಸ್ಪಿ ಕ್ವಾರ್ಟರ್ಸ್ ಪಕ್ಕದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 20 ಲಕ್ಷ ರೂ. ಕೊಟ್ಟು ಕಸಾಪ ಎಂಟು ಗುಂಟೆ ಜಾಗವನ್ನು 30 ವರ್ಷಗಳ ಕಾಲ ಲೀಜ್ಗೆ ಪಡೆದಿದೆ. 30 ವರ್ಷಗಳ ನಂತರ ಮತ್ತೆ ಲೀಸ್ ಮುಂದುವರಿಯಲಿದೆ. ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿರುವ ಜಿಲ್ಲೆಯಲ್ಲಿ ಸಾಹಿತ್ಯ ಭವನಕ್ಕೆ ಅನುದಾನ ಕೊಟ್ಟು ನಂತರ ಆರ್ಥಿಕ ನಿರ್ಬಂಧ ಇತರ ಕಾರಣ ಹೇಳಿ ಹಣ ನೀಡದಿರುವುದು ಸರಿಯಲ್ಲ.
ಈ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿ, ಸಾಹಿತ್ಯ ಭವನಕ್ಕೆ ಮೂರು ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಜಿಲ್ಲೆಯ ಸಾಹಿತ್ಯ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಹಾವೇರಿ ಜಿಲ್ಲಾ ಸಾಹಿತ್ಯ ಭವನ ನಿರ್ವಣಕ್ಕೆ ಘೊಷಿತ ಅನುದಾನ ಬಿಡುಗಡೆ ಮಾಡುವಂತೆ ಮತ್ತೊಮ್ಮೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಹಾಗೂ ಜಿಲ್ಲೆಯ ಶಾಸಕರೊಂದಿಗೆ ರ್ಚಚಿಸಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಬಿಡುಗಡೆ ಮಾಡಿಸುವಂತೆ ಚಿಂತನೆ ನಡೆಸಿದ್ದೇವೆ. | ಲಿಂಗಯ್ಯ ಹಿರೇಮಠ, ಜಿಲ್ಲಾಧ್ಯಕ್ಷ, ಕಸಾಪ, ಹಾವೇರಿ