

ಮಂಡ್ಯ: ತಮ್ಮ ಶ್ರಮದಿಂದ ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನು ಉಳಿಸಿ ಖಾತೆಗಳಲ್ಲಿ ಹಾಕುವುದು. ಆ ಮೂಲಕ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದನ್ನು ಯುವಜನರಲ್ಲಿ ಪ್ರೇರೇಪಿಸಲಾಗುತ್ತಿದೆ. ಇದರಿಂದ ತಮ್ಮ ಕಷ್ಟ ಕಾಲದಲ್ಲಿ ಉಪಯೋಗ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ನಾಗರಾಜು ಸಲಹೆ ನೀಡಿದರು.
ತಾಲೂಕಿನ ಬೇವುಕಲ್ಲು ಗ್ರಾಮದಲ್ಲಿ ಸಂಘದ ಶಾಖಾ ಕಚೇರಿ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಕ್ಷಣಿಕ ಸುಖಕ್ಕಾಗಿ ಸಂಪಾದನೆ ಮಾಡಿದ ಹಣವನ್ನು ಖರ್ಚು ಮಾಡಿಕೊಳ್ಳುವವರೇ ಹೆಚ್ಚಿದ್ದಾರೆ. ಉಳಿತಾಯ ಮನೋಭಾವನೆ ಇರುವವರು ಕಡಿಮೆ ಇದ್ದಾರೆ. ಸಹಕಾರಿ ಎಂಬುದೇ ಅದ್ಬುತವಾದ ಆಲೋಚನೆ. ಉಳಿತಾಯ ಮನೋಭಾವನೆಯನ್ನು ಹುಟ್ಟುಹಾಕುವುದೇ ಇದರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಶಾಖೆಗಳನ್ನು ಸ್ಥಾಪಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಸಹಕಾರಿ ಸಂಘಗಳನ್ನು ಸ್ಥಾಪಿಸುವುದು ಮುಖ್ಯವಲ್ಲ. ಅದರ ಜವಾಬ್ದಾರಿ ತೆಗೆದುಕೊಳ್ಳುವವರು ಹೇಗೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಾರೆ ಎಂಬುದರ ಆಧಾರದ ಮೇಲೆ ಸಂಘದ ಬೆಳವಣಿಗೆ ಸಾಧ್ಯವಾಗುತ್ತದೆ. 12 ವರ್ಷದ ಹಿಂದೆ ಸಹಕಾರಿ ಸಂಘವನ್ನು ಕೆಲವೇ ಜನ ಷೇರುದಾರರಿಂದ ಪ್ರಾರಂಭಿಸಿದ್ದೆವು. ಇಂದು ಅದರ ಶಾಖೆಗಳನ್ನು ತೆರೆದು ಬೃಹದಾಕಾರವಾಗಿ ಬೆಳೆಸಲು ಮುಂದಾಗಿದ್ದೇವೆ. ಇದಕ್ಕೆ ನಮ್ಮ ಸಮುದಾಯದ ಜನತೆ ಸಹಕಾರ ನೀಡುತ್ತಿರುವುದು ನಮಗೆ ಮತ್ತಷ್ಟು ಉತ್ತಾಹ ಹೆಚ್ಚಿಸಿದೆ ಎಂದರು.
16 ಕೋಟಿ ರೂಗೂ ಹೆಚ್ಚು ವ್ಯವಹಾರವನ್ನು ಪ್ರಧಾನ ಕಚೇರಿ ಮಾಡಿದೆ. 2 ಕೋಟಿ ರೂಗೂ ಹೆಚ್ಚು ಸಾಲ ನೀಡಲಾಗಿದೆ. 57 ಲಕ್ಷ ರೂ ಲಾಭ ಮಾಡಿದ್ದೇವೆ. ಷೇರುದಾರರಾಗಿದ್ದವರೆಲ್ಲರಿಗೂ ಶೇ.9ರಷ್ಟು ಲಾಭವನ್ನು ಕೊಟ್ಟಿದ್ದೇವೆ. ನಮ್ಮ ಸಹಕಾರಿಯ ಶಾಖೆಯನ್ನು ಮಂಡ್ಯ ಜಿಲ್ಲೆಯಲ್ಲಿ ವಿಸ್ತರಣೆ ಮಾಡಬೇಕು ಎಂಬ ಆಲೋಚನೆ ಇದೆ. ಇದಕ್ಕೆ ಅತ್ಯಂತ ಸೂಕ್ಷ ಎನ್ನಿಸಿದ್ದು ಬೇವುಕಲ್ಲು ಸೂಕ್ತ ಎನಿಸಿತ್ತು. ಎಲ್ಲರಿಗೂ ಅನುಕೂಲ ಆಗಲಿ ಎಂಬ ಉದ್ದೇಶ ಇಟ್ಟುಕೊಂಡು ಸೌಹಾರ್ಧ ಸಹಕಾರಿ ಪ್ರಾರಂಭ ಮಾಡುತ್ತಿದ್ದೇವೆ. ಇದು ಸುತ್ತಮುತ್ತಲ ಬಹಳಷ್ಟು ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ತೆಂಕಹಳ್ಳಿ ರಸಸಿದ್ದೇಶ್ವರ ಬೆಟ್ಟದ ನಂಜುಂಡಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಸಂಘಗಳ ಅವಶ್ಯಕತೆ ತುಂಬಾ ಇದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ನಿಮ್ಮ ಊರಿಗೆ ಬರುವುದಿಲ್ಲ. ಮನೆ ಬಾಗಿಲಿಗೆ ಬರುವುದು ಸಹಕಾರಿ ಸಂಘಗಳು ಮಾತ್ರ. ಸಹಕಾರ ಎಂದರೆ, ನೀವು ಬ್ಯಾಂಕಿಗೆ ನೀಡುವ ಸಹಕಾರ ಮತ್ತು ಬ್ಯಾಂಕು ನಿಮಗೆ ನೀಡುವ ಸಹಕಾರವೇ ಇದರ ಅಭಿವೃದಿ ಎಂದು ವಿವರಿಸಿದರು.
ಬೇಬಿಬೆಟ್ಟದ ಶಿವಬಸವಮಹಾಸ್ವಾಮೀಜಿ, ಧನಗೂರು ವೀರಸಿಂಹಾಸನ ಮಠದ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಬಿದರವಳ್ಳಿಯ ಮಲ್ಲಿಕಾರ್ಜುನಸ್ವಾಮೀಜಿ, ಗುರುಮಲ್ಲೇಶ್ವರ ದಾಸೋಹ ಮಠದ ಜಯದೇವತಾಯಿ, ಅವ್ವೇರಹಳ್ಳಿಯ ಸಿದ್ದಲಿಂಗಸ್ವಾಮಿ, ತೋಂಟದಾರ್ಯ ಮಠದ ಇಮ್ಮಡಿ ಸದಾಶಿವಸವಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಾಂತೀಯ ವ್ಯವಸ್ಥಾಪಕ ಶಿವಕುಮಾರ್ ಬಿರಾದಾರ, ಪಟೇಲ್ ಗುರುಮಾದಯ್ಯ, ಸೌಹಾರ್ಧ ಸಹಕಾರಿ ಸಂಘದ ಉಪಾಧ್ಯಕ್ಷ ಡಿ.ದ್ಯಾವಣ್ಣ, ಮಲ್ಲಿಕಾರ್ಜುನಸ್ವಾಮಿ ಇತರರಿದ್ದರು.