ಅನುದಾನ ಲಭ್ಯವಿದ್ದರೆ ಕಾಮಗಾರಿ ನಡೆಸಿ, ಇಲ್ಲವಾದರೆ ಬೇಡ

02 HRR
Published on

ಹರಿಹರ: ನಗರಸಭೆ ಅಧಿಕಾರಿಗಳು ಅನುದಾನ ಸಿದ್ಧವಾಗಿದ್ದರೆ ಮಾತ್ರ ಕಾಮಗಾರಿ ನಡೆಸಬೇಕು, ಅನುದಾನ ಕೊಡಿಸುತ್ತೇವೆ ಎಂದು ಯಾವುದೇ ಕಾರಣಕ್ಕೂ ಕಾಮಗಾರಿ ಕೈಗೊಳ್ಳಬಾರದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ನಗರಸಭೆಯ ಕಟ್ಟಡ ಕಾಮಗಾರಿಯನ್ನು ಗುರುವಾರ ವೀಕ್ಷಿಸಿ ಮಾತನಾಡಿದರು.

ನಗರಸಭೆಯಲ್ಲಿ ಇಂಜಿನಿಯರ್ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಕಾಮಗಾರಿಗಳು ನಿಧಾನಗತಿಯಲ್ಲಿವೆ. ಅಗತ್ಯ ಸಿಬ್ಬಂದಿ ನೇಮಕವಾದರೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ನಗರದಲ್ಲಿ ಆಗಬೇಕಾದ ಕಾಮಗಾರಿ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರ್ಚಚಿಸಲು ಸಭೆ ನಡೆಸಲಾಗುವುದು ಎಂದು ಹೇಳಿದರು.

ನಗರಸಭೆಗೆ ನಗರೋತ್ಥಾನ ಯೋಜನೆಯ 8 ಕೋಟಿ ರೂ. ಅನುದಾನ ಮಂಜೂರಾಗಿದೆ. ಹಳೆಯ ಟೆಂಡರ್ ನಿಬಂಧನೆಗಳ ಪ್ರಕ್ರಿಯೆ ಪ್ರಕಾರ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರು ಮುಂದೆ ಬಂದರೆ, ತಕ್ಷಣ ಅವರಿಗೆ ಕಾಮಗಾರಿ ಆದೇಶ ನೀಡಬಹುದಾಗಿದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ, ಜನರ ಸಮಸ್ಯೆ ಗಮನಕ್ಕೆ ತಂದರೆ ಅವುಗಳನ್ನು ಪರಿಹರಿಸಲು ಪೌರಾಯುಕ್ತರು ವಿಳಂಬ ಧೋರಣೆ ಅನುಸರಿಸುತ್ತಾರೆ. ಹಲವು ವಿಷಯಗಳಲ್ಲಿ ನಮ್ಮೊಂದಿಗೆ ರ್ಚಚಿಸದೆ ಏಕ ಪಕ್ಷೀಯ ನಿರ್ಧಾರ ಕೈಗೊಳ್ಳುತ್ತಾರೆ. ನಿರೀಕ್ಷಿತ ಕೆಲಸ, ಕಾರ್ಯ ನಡೆಯದೆ ಜನತೆ ನಮ್ಮನ್ನು ದೂಷಿಸುತ್ತಿದ್ದಾರೆ. ಶೀಘ್ರವೇ ಅಧಿಕಾರಿಗಳ ಸಭೆ ಆಯೋಜಿಸಿ ಎಂದು ಜಿಲ್ಲಾಧಿಕಾರಿಗೆ ಆಗ್ರಹಿಸಿದರು.

ನಗರಸಭೆ ಸದಸ್ಯ ಎ.ವಾಮನಮೂರ್ತಿ ಮಾತನಾಡಿ, ಖಾತಾ ಉತಾರಾ, ಖಾತಾ ಬದಲಾವಣೆ, ಕಟ್ಟಡ ಪರವಾನಗಿ ಸೇರಿ ಕಂದಾಯ ಶಾಖೆಯಿಂದ ಆಗಬೇಕಾದ ಕೆಲಸ ಕಾರ್ಯಗಳಿಗೆ ಜನರು ನಗರಸಭೆಗೆ ಅಲೆದಾಡುವಂತಾಗಿದೆ. ಈ ಕುರಿತು ಸೂಕ್ತ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಗಮನ ಸೆಳೆದರು.

ವಕೀಲ ಮಾರುತಿ ಬೇಡರ್ ಮಾತನಾಡಿ, ಎಸ್​ಎಫ್​ಸಿ, ನಗರೋತ್ಥಾನ, 14 ಮತ್ತು 15ನೇ ಹಣಕಾಸು ಸೇರಿ ವಿವಿಧ ಯೋಜನೆಗಳಡಿ ಮಂಜೂರಾದ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡರೆ ನಗರದ ಅರ್ಧ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ಬಸವಂತಪ್ಪ ಮಾತನಾಡಿ, ನಗರದ ಕೇಂದ್ರ ಗ್ರಂಥಾಲಯ ಸುತ್ತಮುತ್ತಲ ಪ್ರದೇಶದಲ್ಲಿ ಕಸದ ರಾಶಿ, ಅನೈರ್ಮಲ್ಯ ವಾತಾವರಣದಿಂದ ಓದುಗರು ಮೂಗು ಮುಚ್ಚಿಕೊಂಡು ಓದಬೇಕಿದೆ. ಸುತ್ತಲೂ ಸ್ವಚ್ಛತೆ ಕಾಪಾಡಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ಗುರುಬಸವರಾಜ್, ಜಿಲ್ಲಾ ಯೋಜನಾ ಅಧಿಕಾರಿ ಮಹಾಂತೇಶ್, ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ, ಎಇಇ ವಿನಯ್ ಕುಮಾರ್, ವ್ಯವಸ್ಥಾಪಕಿ ನಿರಂಜನಿ, ಎಇ ಪ್ರಕಾಶ್, ಹಿರಿಯ ಆರೋಗ್ಯಾಧಿಕಾರಿ ರವಿ ಪ್ರಕಾಶ್, ಸಿಬ್ಬಂದಿಗಳಾದ ಜಿ.ಕೆ.ಪ್ರವೀಣ್, ರಮೇಶ್, ಪರಸಪ್ಪ, ನಾಗರಾಜ್, ತಮ್ಮಯ್ಯ, ಕೊಟ್ರಮ್ಮ, ನಾಗರತ್ನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net