

ದಾಬಸ್‌ಪೇಟೆ: ವಿವಾದಕ್ಕೆ ಕಾರಣವಾಗಿರುವ ಮಾಕೇನಹಳ್ಳಿ ಗ್ರಾಮದ ಜಮೀನಿಗೆ ಹೈಕೋರ್ಟ್ ಸೂಚನೆ ಮೇರೆಗೆ ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹಾಗೂ ತಂಡ ಭೇಟಿ ನೀಡಿ ಪರಿಶೀಲಿಸಿತು.
ಗ್ರಾಮದ ಸರ್ವೇ ಸಂಖ್ಯೆ 47ರ ಜಮೀನಿನಲ್ಲಿ ಜಲ್ಲಿ ಕ್ರಷರ್ ನಡೆಸುತ್ತಿರುವ ಕಂಪನಿ ಹಾಗೂ ರೈತರ ನಡುವೆ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿ ಹೈಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಜಮೀನು ಪರಿಶೀಲನೆ ನಡೆಸಿ ವರದಿ ಪಡೆದರು.
ಏನಿದು ಪ್ರಕರಣ?: ಮಾಕೇನಹಳ್ಳಿ ನಿವಾಸಿ ಕುಂಬಿ ನರಸಿಂಹಯ್ಯ ಅವರ ತಂದೆ ಹೆಸರಿನಲ್ಲಿ ಈ ಜಮೀನು ಇದ್ದು, ಖಾಸಗಿ ಕ್ರಷರ್ ಕಂಪನಿಗೆ ಈ ಜಮೀನನ್ನು ಗುತ್ತಿಗೆ ನೀಡಲಾಗಿದೆ ಎನ್ನಲಾಗಿದೆ. ನಂತರ ಇದೇ ಜಮೀನನ್ನು ಸರ್ಕಾರ ಕೂಡ ಗುತ್ತಿಗೆ ನೀಡಿದೆ. ಹೀಗಾಗಿ ಈ ಜಮೀನು ಮಾಲೀಕತ್ವದ ಪ್ರಶ್ನೆ ಎದುರಾಗಿದೆ. ವಿಭಾಗಾಧಿಕಾರಿ ಈ ಜಮೀನನ್ನು ಹಲವು ವರ್ಷಗಳ ಹಿಂದೆ ಕುಂಬಿನರಸಿಂಹಯ್ಯ ಅವರ ತಂದೆಗೆ ವರ್ಗಾಯಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
27 ವರ್ಷದ ಅವಧಿಗೆ ಗುತ್ತಿಗೆ ಪಡೆದ ಕಂಪನಿ ಮಾಲೀಕರು ಈಗ ಜಮೀನು ನಿಮ್ಮದಲ್ಲ, ಸರ್ಕಾರದ ಗೋಮಾಳ ಎಂದು ಖ್ಯಾತೆ ತೆಗೆದಿದ್ದಾರೆ. ಅಲ್ಲದೆ ನಿಯಮದಂತೆ ಗುತ್ತಿಗೆ ಹಣ ನೀಡುತ್ತಿಲ್ಲ. ಗುತ್ತಿಗೆದಾರರು ಪ್ರಭಾವಿಗಳಾಗಿದ್ದು ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಿಸುತ್ತಿದ್ದಾರೆ ಎಂದು ಕಂಬಿ ನರಸಿಂಹಯ್ಯ ಆರೋಪಿಸಿದ್ದರು. ಪ್ರಕರಣ ಕೋರ್ಟ್ ಮೇಟ್ಟಿಲೇರಿತ್ತು.
ಹೈಕೋರ್ಟ್ ಆದೇಶದಂತೆ ಜಮೀನು ಪರಿಶೀಲನೆ ನಡೆಸಲಾಗಿದೆ. ವರದಿ ತಯಾರಿಸಿ ಕೋರ್ಟ್‌ಗೆ ಸಲ್ಲಿಸಲಾಗುವುದು. ಪಿ.ಎನ್.ರವೀಂದ್ರ ಗ್ರಾಮಾಂತರ ಜಿಲ್ಲಾಧಿಕಾರಿ