

ಮಂಡ್ಯ: ಎಸ್‌ಎಸ್‌ಎಲ್‌ಸಿ ಫಲಿತಾಂಶದತ್ತ ಹೆಚ್ಚು ಗಮನವಹಿಸುವ ಮೂಲಕ ಜಿಲ್ಲೆಯ ಶೇಕಡಾ ಫಲಿತಾಂಶ ವೃದ್ಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಈಗಾಗಲೇ ನಿಗದಿಯಾಗಿರುವ ಪಠ್ಯಗಳ ಪ್ರವಚನ ಪೂರ್ಣಗೊಂಡಿದ್ದು, ಅವುಗಳ ಪುನರಾವರ್ತನೆ ಮಾಡಿ. ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಿ.
ವಿದ್ಯಾರ್ಥಿಗಳ ಪ್ರತಿ ಕಿರು ಪರೀಕ್ಷೆಯ ಫಲಿತಾಂಶವನ್ನು ಅಧ್ಯಯನ ನಡೆಸಿ ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಕಡೆ ಹೆಚ್ಚಿನ ಆತ್ಮವಿಶ್ವಾಸ ಹಾಗೂ ವಿಶೇಷ ತರಗತಿಗಳನ್ನು ನಡೆಸಿ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, 2024-25 ನೇ ಆರ್ಥಿಕ ಸಾಲು ಅಂತ್ಯವಾಗುತ್ತಿದ್ದು, ಇಲಾಖೆಗಳು ನಿಗದಿಪಡಿಸಿರುವ ಗುರಿಗಳನ್ನು ಶೇ.100 ರಷ್ಟು ಸಾಧನೆಯಾಗಬೇಕು. ಇದರೊಂದಿಗೆ ಜನವರಿ ಅಂತ್ಯದಲ್ಲಿ ಮುಖ್ಯಮಂತ್ರಿ ಅವರು ರಾಜ್ಯಮಟ್ಟದಲ್ಲಿ ಜಿಲ್ಲಾಧಿಕಾರಿ ಹಾಗೂ ಸಿಇಒ ಸಭೆ ನಡೆಸಲಿದ್ದಾರೆ. ಇಲಾಖೆಗಳು ತಮ್ಮ ಸಾಧನೆಯ ನಿಖರ ಮಾಹಿತಿ ನೀಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಜ.7ರಂದು ನಡೆಯಲಿದ್ದು, ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಬರುವ ಕೆರೆಗಳು ತುಂಬಿರುವ ಬಗ್ಗೆ ನಿಖರ ಮಾಹಿತಿ ಹಾಗೂ ನೀರು ತುಂಬಿಸಲು ಸಾಧ್ಯವಾಗದ ಕೆರೆಗಳಿಗೆ ಸಂಬಂಧಿಸಿದಂತೆ ಸರಿಯಾದ ಕಾರಣ ಒದಗಿಸಬೇಕು. ಪಿ.ಎಂ.ಕಿಸಾನ್ ಯೋಜನೆಯ18ನೇ ಕಂತು ಸಹಾಯಧನ ರೈತರಿಗೆ ಬಿಡುಗಡೆಯಾಗಿದೆ. ಆದರೆ ಬಹಳಷ್ಟು ಜನ ಹಣ ಪಾವತಿಯಾಗಿಲ್ಲ ಎಂದು ಮನವಿ ಸಲ್ಲಿಸುತ್ತಿದ್ದು, ಇದರ ಬಗ್ಗೆ ಇಲಾಖೆ ಅವರು ಫಲಾನುಭವಿಗಳ ಬ್ಯಾಂಕ್ ಖಾತೆ ಇ-ಕೆವೈಸಿ ಬಗ್ಗೆ ಪರಿಶೀಲಿಸಿ ಎಲ್ಲರಿಗೂ ತಲುಪಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಿ ಎಂದರು.
ಇಂದಿರಾ ಕ್ಯಾಂಟೀನ್‌ನಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಶುಚಿ-ರುಚಿ ಆಹಾರ ಒದಗಿಸುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಲು ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ಜಿಲ್ಲೆಯಲ್ಲಿ 8 ಇಂದಿರಾ ಕ್ಯಾಂಟೀನ್‌ಗಳು ಕಾರ್ಯ ನಿರ್ವಹಿಸುತ್ತಿದ್ದು ಮತ್ತೊಂದು ಇಂದಿರಾ ಕ್ಯಾಂಟೀನ್ ಅನ್ನು ನಾಗಮಂಗಲದ ಬೆಳ್ಳೂರಿನಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ನರೇಗಾ ಯೋಜನೆ, ಜಲ ಜೀವನ್ ಮಿಷನ್, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಸ್ವಚ್ಛ ಭಾರತ್ ಮಿಷನ್ ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಬಿ.ಸಿ ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ, ಶ್ರೀನಿವಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಮೋಹನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಶಿವರಾಮೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚಲುವಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.