ಜಿಲ್ಲೆಯಲ್ಲಿ ಭರ್ತಿಯಾಗದ 520 ಕೆರೆ: ನೀರು ತುಂಬಿಸುವಂತೆ ಉಸ್ತುವಾರಿ ಕಾರ್ಯದರ್ಶಿ ಸೂಚನೆ

District Incharge Secretary meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೂ ಕಾವೇರಿ ಕಣಿವೆಯಲ್ಲಿ ವರುಣ ಅಬ್ಬರಿಸಿದ ಪರಿಣಾಮ ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಯಿತು. ಮಾತ್ರವಲ್ಲದೆ ತಮಿಳುನಾಡಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಯಿತು. ಆದರೆ ಜಿಲ್ಲೆಯಲ್ಲಿರುವ ಕೆರೆ ಕಟ್ಟೆಗಳನ್ನು ತುಂಬಿಸುವ ಆಸಕ್ತಿಯನ್ನು ಅಧಿಕಾರಿಗಳು ತೋರಲಿಲ್ಲ. ಪರಿಣಾಮ ಶೇ.50ರಷ್ಟು ಕೆರೆ ಇಂದಿಗೂ ಭರ್ತಿಯಾಗಿಲ್ಲ. ಅದರಲ್ಲಿಯೂ 143 ಕೆರೆಯಲ್ಲಿ ಕಾಲು ಭಾಗದಷ್ಟು ನೀರಿಲ್ಲ ಎನ್ನುವುದು ಗಮನಾರ್ಹ.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಭುಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆರೆ ಭರ್ತಿಯಾಗದಿರುವ ಬಗ್ಗೆ ಚರ್ಚೆಯಾಯಿತು. ಇನ್ನೆನ್ನೂ ಮಳೆಗಾಲದ ಅವಧಿಯೂ ಮುಗಿಯುತ್ತಾ ಬಂದರೂ ಕೆರೆಗೆ ನೀರು ತುಂಬಿಸಿಲ್ಲ. ಇಂತಹ ನಿರ್ಲಕ್ಷೃತನದಿಂದ ಬೇಸಿಗೆ ಕಾಲದ ಪರಿಸ್ಥಿತಿ ಏನು ಎನ್ನುವ ಆತಂಕ ಜಿಲ್ಲೆಯ ರೈತರನ್ನು ಕಾಡಲಾರಂಭಿಸಿದೆ. ಸಿಎಂ ಮತ್ತು ಡಿಸಿಎಂ ಜಿಲ್ಲೆಯ ಕೆರೆಗೆ ನೀರು ತುಂಬಿಸಲು ಸೂಚನೆ ಕೊಟ್ಟಿದ್ದೇನೆ ಎನ್ನುವ ಮಾತು ವೇದಿಕೆಗೆ ಸೀಮಿತವಾದಂತಾಗಿದೆ.

ಸಭೆಯಲ್ಲಿ ಮಳೆ ಹಾಗೂ ಕೆರೆಗಳ ವಾಸ್ತವ ಸ್ಥಿತಿ ಬಿಚ್ಚಿಟ್ಟಿರುವ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲೆಯಲ್ಲಿನ ಒಟ್ಟು 968 ಕೆರೆಗಳ ಪೈಕಿ 448 ಕೆರೆ ಶೇ.100ರಷ್ಟು ಅಂದರೆ ಸಂಪೂರ್ಣವಾಗಿ ತುಂಬಿದೆ. ಉಳಿದಂತೆ 132 ಕೆರೆಗಳು ಶೇ.75 ರಿಂದ 100ರಷ್ಟು, 123 ಕೆರೆ ಶೇ.50ನಿಂದ 75ರಷ್ಟು, 122 ಕೆರೆಗಳು ಶೇ.25ರಿಂದ 50ರಷ್ಟು ಹಾಗೂ 143 ಕೆರೆಯಲ್ಲಿ ಶೇ.25ಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿ ಅನ್ಭುಕುಮಾರ್, ಎಲ್ಲ ಕೆರೆಗಳಿಗೆ 15 ದಿನದೊಳಗೆ ನೀರು ತುಂಬಿಸಲು ಕ್ರಮ ವಹಿಸಬೇಕು. ಕೆಲ ಕೆರೆಗಳು ಮಳೆಯಾಶ್ರಿತವಾಗಿವೆ. ಈ ಬಾರಿ ಉತ್ತಮ ಮಳೆಯಾಗಿದ್ದರೂ ಕೆರೆ ತುಂಬಿಲ್ಲ ಎಂದರೆ ಕೆರೆಯ ನೀರು ಹರಿದು ಬರುವ ಸ್ಥಳಗಳಲ್ಲಿ ಒತ್ತುವರಿಯಾಗಿರುತ್ತದೆ. ಕೆರೆಯ ಸ್ಥಳ ಪರಿಶೀಲನೆ ನಡೆಸಿದರೆ, ಅಲ್ಲಿಯ ರೈತರು ಅದಕ್ಕೆ ಸರಿಯಾದ ಕಾರಣ ನೀಡುತ್ತಾರೆ. ಆದ್ದರಿಂದ ತಹಸೀಲ್ದಾರ್ ನೇತೃತ್ವದಲ್ಲಿ ಕೆರೆ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.

ಕೆರೆಗಳು ಬದುಕಿನ ಆಧಾರ, ಒಂದು ಕೆರೆ ತುಂಬಿದರೆ ಎರಡು ಅಥವಾ ಮೂರು ಹಳ್ಳಿಗೆ ನೀರು ಒದಗಿಸಬಹುದು. ವಿಪತ್ತು ನಿರ್ವಹಣಾ ಅನುದಾನದಲ್ಲಿ ಕೆರೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು 2 ಲಕ್ಷ ರೂ ಬಳಕೆ ಮಾಡಿಕೊಳ್ಳಬಹುದು. ಇನ್ನು ಬಡವರ ಮನೆ ಹಾನಿಯಾದಾಗ 48 ಗಂಟೆಯೊಳಗೆ ಪರಿಶೀಲನೆ ನಡೆಸಿ ಸರ್ಕಾರ ನೀಡುವ ಪರಿಹಾರದ ಹಣವನ್ನು ಒದಗಿಸುವುದು ತಹಸೀಲ್ದಾರ್ ಜವಾಬ್ದಾರಿಯಾಗಿದೆ. ಅಕ್ಟೋಬರ್‌ನಲ್ಲಿ ಮಳೆಯಿಂದ ಹಾನಿಯಾಗಿರುವ 84 ಮನೆಗೆ ಸಂಬಂಧಿಸಿದಂತೆ ಪರಿಹಾರ ಪಾವತಿಯಾಗಿಲ್ಲ. ಎರಡು ದಿನದಳೊಳಗೆ ಪರಿಹಾರ ಒದಗಿಸಿ ವರದಿ ನೀಡುವಂತೆ ಸೂಚನೆ ನೀಡಿದರು.

ಇನ್ನು ಬೆಳೆ ಸಮೀಕ್ಷೆ ಅಂಗೈಯಲ್ಲಿ ಮಾಹಿತಿ ರೈತರಿಗೆ ರಸಗೊಬ್ಬರ, ಮಳೆ ಹಾನಿ, ಬರ ಪರಿಹಾರ ಸೇರಿದಂತೆ ವಿವಿಧ ರೀತಿಯ ಕೃಷಿ ಹಾಗೂ ತೋಟಗಾರಿಕೆ ಸೌಲಭ್ಯ ಒದಗಿಸಲು ಸಹಕಾರಿಯಾಗಲಿದೆ. ಬೆಳೆ ಸಮೀಕ್ಷೆಯನ್ನು ಅಂಗೈಯಲ್ಲಿ ಮಾಹಿತಿ ಎನ್ನಬಹುದು. ಇದು ಶೇ.100 ರಷ್ಟು ಪೂರ್ಣಗೊಳ್ಳಬೇಕು. ಅರ್ಹ ಫಲಾನುಭವಿಗಳಿಗೆ ಪಂಚ ಗ್ಯಾರಂಟಿ ಯೋಜನೆಗಳು ತಲುಪಬೇಕು. ಬ್ಯಾಂಕ್ ಖಾತೆ ಸಂಖ್ಯೆಗೆ ಆಧಾರ್ ಜೋಡಣೆ ಮಾಡದೇ ಇರುವುದು ಹಣ ಪಾವತಿ ತಲುಪದೆ ಇರುವುದು ಮುಖ್ಯ ಕಾರಣವಾಗಿರುತ್ತದೆ. ಇದನ್ನು ಫಲಾನುಭವಿಗಳಿಗೆ ಮಾಹಿತಿ ನೀಡಿ ಸರಿಪಡಿಸಿ ಇದರಿಂದ ಬಹಳಷ್ಟು ಸಮಸ್ಯೆ ಪರಿಹಾರವಾಗುತ್ತದೆ ಎಂದರು.

ಮುಂಬರುವ ಎಸ್‌ಎಸ್‌ಎಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ. ಪ್ರತಿ ತಾಲೂಕುವಾರು ಪರಿಶೀಲನೆ ನಡೆಸಿ, ವಿಶೇಷ ತರಗತಿ ಆಯೋಜಿಸುವುದರ ಜತೆಗೆ ಪ್ರತಿ ಶಾಲೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ. ಒಟ್ಟಾರೆ ಉತ್ತಮ ಫಲಿತಾಂಶ ಬರುವಂತೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬೇಕು. ಎಲ್ಲ ಅಧಿಕಾರಿಗಳು ತಮ್ಮ ಇಲಾಖೆ ನೀಡುವ ನಿರ್ದೇಶನ ಹಾಗೂ ಸೂಚನೆಯಂತೆ ಕಾರ್ಯ ನಿರ್ವಹಿಸಿ. ಇಲಾಖೆಗಳಲ್ಲಿ ಅವಧಿ ಮೀರಿ ಯಾವುದೇ ಪ್ರಕರಣಗಳು ಬಾಕಿ ಉಳಿಯದಂತೆ ಪಾರದರ್ಶಕವಾಗಿ ಕೆಲಸ ಮಾಡಿ ಎಂದು ತಿಳಿಸಿದರು. ಡಿಸಿ ಮಾತನಾಡಿ, ವಿಪತ್ತು ನಿರ್ವಹಣೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳು, ಬಾಲ್ಯ ವಿವಾಹ ಪ್ರಕರಣಗಳು ಕ್ರಮೇಣ ಕಡಿಮೆಯಾಗುತ್ತಿದ್ದು, ಇದಕ್ಕೆ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಲಜೀವನ್ ಮಿಷನ್, ಶುದ್ಧ ಕುಡಿಯುವ ನೀರಿನ ಘಟಕ, ಬೂದು ನೀರು, ತ್ಯಾಜ್ಯ ನಿರ್ವಹಣೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಅಂತೆಯೇ ಜಿಲ್ಲೆಯಲ್ಲಿ ಒಟ್ಟು 233 ಗ್ರಾಮ ಪಂಚಾಯಿತಿಗಳಿದ್ದು, 1,306 ಗ್ರಾಮಗಳಿವೆ. ಜಲಜೀವನ್ ಮಿಷನ್ ಯೋಜನೆಯಡಿ ಒಟ್ಟು 3,61,862 ಕುಟುಂಬಕ್ಕೆ ನಳ ಸಂಪರ್ಕ ಕಲ್ಪಿಸಲಾಗಿದ್ದು, 39,263 ಕುಟುಂಬ ಬಾಕಿ ಇದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಇ.ಗಂಗಾಧರಸ್ವಾಮಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net