

ಮಂಡ್ಯ: ಜಿಲ್ಲಾ ಪಂಚಾಯಿತಿ ಲಿಂಕ್ ಡಾಕ್ಯೂಮೆಂಟ್‌ನಡಿ ಮಂಜೂರಾಗಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಪಂ ಲಿಂಕ್ ಡಾಕ್ಯೂಮೆಂಟ್‌ನಲ್ಲಿ 250 ಕಾಮಗಾರಿ ಆಡಳಿತಾತ್ಮಕ ಮಂಜೂರಾತಿ ಆಗಿದೆ. ಕರಾರು ಮಾಡಿಕೊಂಡಿರುವ ಕೆಲ ಕಾಮಗಾರಿ ಪ್ರಾರಂಭವಾಗಿರುವುದಿಲ್ಲ. ಇದರ ಬಗ್ಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಇಂಜಿನಿಯರಿಂಗ್ ಇಲಾಖೆಯೊಂದಿಗೆ ಸಮನ್ವಯ ವಹಿಸಿ ಕೆಲಸಗಳು ಪ್ರಾರಂಭವಾಗುವಂತೆ ನೋಡಿಕೊಳ್ಳಬೇಕು. ಕೆಲಸಗಳು ಪ್ರಾರಂಭವಾಗದಿದ್ದರೆ ಇಲಾಖೆಗಳಿಗೆ ತೊಂದರೆಯಾಗುತ್ತದೆ ಎಂಬುದನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು ಎಂದರು.
ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪ್ರಾರಂಭಿಸಿ ಆರ್ಥಿಕ ವರ್ಷದಲ್ಲೇ ಅನುದಾನ ವೆಚ್ಚ ಮಾಡುವುದು. ವೆಚ್ಚವಾಗದೇ ಉಳಿದಲ್ಲಿ ಮುಂದಿನ ಸಾಲಿಗೆ ಅದನ್ನು ನೀಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಉಳಿದಿರುವ ದಿನಗಳಲ್ಲಿ ಶೀಘ್ರಗತಿಯಲ್ಲಿ ಕಾರ್ಯನಿರ್ವಹಿಸಿ. ಅಂತೆಯೇ ವಿವಿಧ ಯೋಜನೆಗಳಡಿ ಸಾಮಾನ್ಯ ಸಭೆಯಲ್ಲಿ ಆಯ್ಕೆಯಾಗಬೇಕಿರುವ ಫಲಾನುಭವಿಗಳ ಪಟ್ಟಿಯನ್ನು ನಿಯಮಾನುಸಾರ ಸಲ್ಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.