

ಕಾರವಾರ: ಸಚಿವರು ಉಸ್ತುವಾರಿ ಕಾರ್ಯದರ್ಶಿ ಬದಲಾಯಿಸಿದರೂ ಕಾರ್ಯ ವಿಧಾನ ಮಾತ್ರ ಬದಲಾಗಿಲ್ಲ. ಹಾಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಸಚಿವರ ಸಭೆಗಳಿಗೆ, ಜಿಪಂ ಸಭೆಗಳಿಗೂ ಬರದೇ ದೂರ ಉಳಿದಿದ್ದಾರೆ.!!
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಮಾಹಿತಿ ಆಯೋಗದ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ ಅವರ ನೇಮಕವಾಗಿ ಮೂರು ತಿಂಗಳು ಕಳೆಯುತ್ತ ಬಂದಿದೆ. ಒಮ್ಮೆ ಮಾತ್ರ ಅವರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಅವರು ಜಿಲ್ಲಾ ಉಸ್ತುವಾರಿ ಸಚಿವರ ಜತೆ ಯಾವುದೇ ಸಭೆಗಳಲ್ಲಿ ಪಾಲ್ಗೊಂಡಿಲ್ಲ. ಆದರೆ, ಮಾ.4 ರಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಡೆಸಿದ ದಿಶಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಗುರುವಾರ ಜಿಲ್ಲಾ ಪಂಚಾಯಿತಿ ಆಡಳಿತ ಅಽಕಾರಿಯೂ ಆಗಿರುವ ಅವರು ಜಿಪಂ ಸಾಮಾನ್ಯ ಸಭೆಯನ್ನೂ ವಿಡಿಯೋ ಕಾನರೆನ್ಸ್ ಮೂಲಕವೇ ಮಾಡಿ ಮುಗಿಸಿ ಅಚ್ಚರಿ ಮೂಡಿಸಿದರು.
ಸಚಿವ-ಕಾರ್ಯದರ್ಶಿ ಮುನಿಸು:
2024 ರಲ್ಲಿ ಹಿರಿಯ ಐಎಎಸ್ ಅಽಕಾರಿ ರಿತೇಶ ಕುಮಾರ ಸಿಂಗ್ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿದ್ದರು. ಆದರೆ, ಸಿಂಗ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಮುನಿಸು ಕಾಣಿಸಿಕೊಂಡಿತ್ತು. ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ನಡೆಸುವ ಯಾವುದೇ ಪ್ರಗತಿ ಪರಿಶೀಲನಾ ಸಭೆಗಳಿಗೆ ರಿತೇಶ ಕುಮಾರ ಸಿಂಗ್ ಹಾಜರಾಗುತ್ತಿರಲಿಲ್ಲ. ಪ್ರತ್ಯೇಕವಾಗಿ ಆಗಮಿಸಿ ಅಧಿಕಾರಿಗಳ ಸಭೆ ನಡೆಸುತ್ತಿದ್ದರು.
ಶಿರಸಿ-ಕುಮಾಟಾ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್, ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ವಿಸ್ತರಣೆ ಕಾಮಗಾರಿ ವಿಚಾರದಲ್ಲಿಯೂ ಸಚಿವರು ಹಾಗೂ ಕಾರ್ಯದರ್ಶಿಯ ನಡುವೆ ಇರುವ ಭಿನ್ನಾಭಿಪ್ರಾಯ ಬಯಲಾಗಿತ್ತು. ಸಚಿವ ಮಂಕಾಳ ವೈದ್ಯ ಅವರು ರಿತೇಶ ಕುಮಾರ ಸಿಂಗ್ ವಿರುದ್ಧ ನೇರವಾಗಿ ಮಾಧ್ಯಮಗಳ ಎದುರು ಹರಿಹಾಯ್ದಿದ್ದರು. `ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಯ ಅಭಿವೃದ್ಧಿ ಚಟುವಟಿಕೆಗಳಿಗೆ ಬರುತ್ತಾರೋ ಹೆದ್ದಾರಿ ಗುತ್ತಿಗೆ ಕಂಪನಿಗಳ ಜತೆ ಸೆಟಲ್‌ಮೆಂಟ್‌ಗೆ ಬರುತ್ತಾರೋ ಗೊತ್ತಿಲ್ಲ' ಎಂದು ಕಿಡಿ ಕಾರಿದ್ದರು. ಮಂಕಾಳ ಅವರ ಆಪ್ತ ಶಾಸಕ ಸತೀಶ ಸೈಲ್ ಸಹ ರಿತೇಶ ಅವರ ಕಾರ್ಯ ವೈಖರಿಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಬೆಳವಣಿಗೆಯ ನಂತರ ಒಂದೇ ತಿಂಗಳಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ ಕುಮಾರ ಸಿಂಗ್ ಅವರಿಗೆ ರಾಯಚೂರಿನ ಜವಾಬ್ದಾರಿ ವಹಿಸಲಾಗಿತ್ತು. ಜಿಲ್ಲೆಗೆ ಮಾಹಿತಿ ಆಯೋಗದ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ ಅವರನ್ನು ನೇಮಕ ಮಾಡಿ ಸರ್ಕಾರ 2024 ರ ಡಿಸೆಂಬರ್ 3 ನೇ ವಾರದಲ್ಲಿ ಆದೇಶ ಹೊರಡಿಸಲಾಗಿತ್ತು.
ಕಾರ್ಯದರ್ಶಿ ಜವಾಬ್ದಾರಿ ಏನು..?
ಜಿಲ್ಲೆಯಲ್ಲಿ ಪ್ರವಾಸ ಮಾಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು. ಜಿಲ್ಲೆಯ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ನಡೆಸುವ ಕೆಡಿಪಿ ಸಭೆಗಳಲ್ಲಿ ಪಾಲ್ಗೊಂಡು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಗಮನ ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಜವಾಬ್ದಾರಿಯನ್ನು ಸರ್ಕಾರ ಸ್ಪಷ್ಟಪಡಿಸಿದೆ.
ಇತ್ತೀಚಿನ ಮೂರು ವರ್ಷದಿಂದ ಜಿಲ್ಲಾ ಪಂಚಾಯಿತಿಗೆ ಚುನಾಯಿತ ಪ್ರತಿನಿಽಗಳು ಇಲ್ಲದ ಕಾರಣ ಉಸ್ತುವಾರಿ ಕಾರ್ಯದರ್ಶಿಗಳನ್ನೇ ಜಿಪಂ ಆಡಳಿತಾಽಕಾರಿಗಳನ್ನಾಗಿ ನೇಮಿಸಲಾಗಿದೆ. ಆದರೆ, ಉಸ್ತುವಾರಿ ಕಾರ್ಯದರ್ಶಿಗಳು ಜಿಪಂ ಕಾರ್ಯಕ್ರಮಗಳ ಬಗ್ಗೆ ಕೂಲಂಕುಶವಾಗಿ ಗಮನ ಹರಿಸದೇ ಇರುವುದು ಕಂಡು ಬಂದಿದೆ. ಅವರು ಜಿಪಂನ ವ್ಯಾಪ್ತಿಯಲ್ಲಿ ಓಡಾಡದೇ ದಾಖಲೆಗಳಲ್ಲಿ ಆದ ಕಾಮಗಾರಿ ಭೌತಿಕವಾಗಿ ಆಗಿದೆಯೋ ಎಂದು ಪರಿಶೀಲಿಸದೇ ವಿಡಿಯೋ ಕಾನರೆನ್ಸ್ ಸಭೆ ಮಾಡಿ ಮುಗಿಸುತ್ತಿರುವುದು ಎಷ್ಟು ಸರಿ ಎಂದು ಜಿಪಂ ಮಾಜಿ ಸದಸ್ಯರೊಬ್ಬರು ಪ್ರಶ್ನಿಸಿದ್ದಾರೆ.