

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವ ಕುರಿತು ಯುವ ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ಆ.5 ರಂದು ಬೆಳಗ್ಗೆ 11ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಈ ವೇಳೆ ಮಹತ್ವದ ಸಾಕ್ಷ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಆರ್‌ಸಿಬಿ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಯಾವುದೇ ರ‌್ಯಾಲಿ ನಡೆಸಬಾರದು ಎಂದು ಹೈಕೋರ್ಟ್ ಆದೇಶ ನೀಡಿರುವುದರಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯ ಉಸ್ತುವಾರಿ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಪರಾಜಿತ ಅಭ್ಯರ್ಥಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಭಾಗಿಯಾಗಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಿಂದ ಕನಿಷ್ಟ 5 ಸಾವಿರ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಪಕ್ಷದ ಪ್ರತಿ ಕಾರ್ಯಕರ್ತರು, ಸಾಧ್ಯವಾದಷ್ಟು ಯುವಕರು ಭಾಗಿಯಾಗಿ ರಾಷ್ಟ್ರದ ಸ್ಥಿತಿಗತಿಯ ಕುರಿತು ತಿಳಿದುಕೊಳ್ಳಬೇಕು. ರಾಹುಲ್ ಗಾಂಧಿ ಅವರು ಮತಗಳ್ಳತನದ ಕುರಿತಾಗಿ ಗಂಭೀರ ಚರ್ಚೆ ನಡೆಸಲಿದ್ದಾರೆ. ಮತಗಳ್ಳತನದ ಕುರಿತಾಗಿ ದಾಖಲೆಯ ಸಮೇತ ಸತ್ಯ ಬಿಚ್ಚಿಡಲಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆಯೂ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡಿದ್ದೇವೆ. ಅಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ನಮ್ಮವರು ಸ್ವಲ್ಪ ಉದಾಸಿನಿನ ತೋರಿದ್ದರು. ಚುನಾವಣಾ ಆಯೋಗದಿಂದ ಅಕ್ರಮ ನಡೆಯಲ್ಲ ಎಂಬ ನಂಬಿಕೆ ಇತ್ತು. ಆದರೆ ಈಗ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂದು ಕಂಡು ಬಂದಿದೆ. ಬೆಂಗಳೂರಿನ ಮಹದೇವಪುರ, ರಾಜಾಜಿನಗರ, ಗಾಂಧಿನಗರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಮತಗಳ್ಳತನ ನಡೆದಿರುವುದು ಗೊತ್ತಾಗಿದೆ ಎಂದು ಹೇಳಿದರು.
ಐಟಿ, ಇಡಿ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿರುವಂತೆ ಚುನಾವಣಾ ಆಯೋಗವನ್ನೂ ದುರುಪಯೋಗಪಡಿಸಿಕೊಂಡಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಆದ್ದರಿಂದ ಪ್ರಜಾಪ್ರಭುತ್ವ ಉಳಿಯಬೇಕು ಎಂದರೆ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಬೇಕಾಗಿದೆ. ಇವಿಎಂ ಯಂತ್ರದ ಅನುಮಾನವೇ ಬೇರೆ, ಮತಪಟ್ಟಿ ಅಕ್ರಮವೇ ಬೇರೆ. ಇದಕ್ಕೂ ಅದಕ್ಕೂ ಹೊಂದಾಣಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಒಂದು ವರ್ಷ 4 ತಿಂಗಳಲ್ಲಿ 981 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ರೈತರ ಆತ್ಮಹತ್ಯೆಯನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಬೇಕೆಂದೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೂ ಆತ್ಮಹತ್ಯೆ ಪ್ರಕರಣಗಳು ಮುಂದುವರೆಯುತ್ತಿವೆ. ಕೋಲಾರ ಜಿಲ್ಲೆಯಲ್ಲಿ ಶೂನ್ಯ ಇದ್ದರೆ, ಹಾವೇರಿಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪುತ್ತಿಲ್ಲ. ಯಾವ ಕಾರಣಕ್ಕಾಗಿ ಆತ್ಮಹತ್ಯೆ ಆಗುತ್ತಿವೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸರ ತಂಡ ರಚಿಸಿ ತನಿಖೆ ನಡೆಸಿ ವರದಿ ಕೇಳಿದ್ದಾರೆ. ಯಾವ ಹಂತದಲ್ಲಿದೆ ಎಂಬುದು ಗೊತ್ತಿಲ್ಲ. ಅಲ್ಲದೆ, ಮುಖ್ಯಮಂತ್ರಿಗಳು ಖಾಸಗಿ ಸಂಸ್ಥೆಯಿಂದ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ. ಪ್ರಸ್ತುತ ರೈತ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದೆ. ಆದರೆ ಕಡಿಮೆ ಆಗಿರೋದು ಖುಷಿ ತಂದಿಲ್ಲ, ರೈತ ಆತ್ಮಹತ್ಯೆ ಸಂಪೂರ್ಣ ನಿಲ್ಲಬೇಕು ಎಂದರು.
ಸೆಸ್ಕ್ ಅಧ್ಯಕ್ಷರೂ ಆದ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ರಾಮ್‌ಪ್ರಸಾದ್, ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ, ಜಿಲ್ಲಾ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶುಭದಾಯಿನಿ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಅಪ್ಪಾಜಪ್ಪ ಹಾಜರಿದ್ದರು.
ಸಾಮಾನ್ಯ ತಿಳಿವಳಿಕೆ ಇಲ್ಲದ ಅಶೋಕ್
ರಾಜ್ಯದಲ್ಲಿ ಯೂರಿಯಾ ರಸಗೊಬ್ಬರದ ಅಭಾವ ಇರುವುದು ನಿಜ. ಆದರೆ, ಬಿಜೆಪಿಯವರು ಬಿಂಬಿಸುವಂತೆ ಅಭಾವವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ರಾಜ್ಯ ಸರ್ಕಾರಕ್ಕೆ ರಸಗೊಬ್ಬರ ಕಳುಹಿಸುವುದು ಕೇಂದ್ರ ಸರ್ಕಾರ. ಅಂತೆಯೇ ರಸಗೊಬ್ಬರ ತಯಾರಿಕೆ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ವಿರೋಧ ಪಕ್ಷದ ನಾಯಕ ಆರ್.ಅಕೋಶ್ ಅವರಿಗೆ ಇದರ ಕುರಿತಾಗಿ ಸಾಮಾನ್ಯ ತಿಳಿವಳಿಕೆ ಇಲ್ಲ. ಜುಲೈ ಅಂತ್ಯದವರೆಗೆ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ನೀಡಬೇಕಿದ್ದ 1.25 ಸಾವಿರ ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರವನ್ನು ನೀಡಿಲ್ಲ. ಇದರಿಂದ ಸಣ್ಣ ಪ್ರಮಾಣದಲ್ಲಿ ರಸಗೊಬ್ಬರ ವಿತರಣೆಯಲ್ಲಿ ವಿಳಂಬವಾಗಿದೆ ಅಷ್ಟೇ ಎಂದರು.
ಹಿಂದೆ ಯಡಿಯೂರಪ್ಪ ಆಡಳಿತದ ಅವಧಿಯಲ್ಲಿ ಗಲಾಟೆಯೇ ನಡೆಯಿತು. ಆಗಲೂ ಕೇಂದ್ರದಿಂದಲೇ ಗೊಬ್ಬರ ಬರುತ್ತಿತ್ತು. ಈಗ ಪೂರೈಕೆ ಕಡಿಮೆ ಮಾಡಿ ರೈತರಿಗೆ ಗೊಂದಲ ಮೂಡಿಸುತ್ತಿರುವುದು ಬಿಜೆಪಿ. ನಾನು ರೈತರ ಪರವಾಗಿ ಇರುವವನು. ಯಾರದೇ ತಪ್ಪು ಇದ್ದರೂ ಜವಾಬ್ದಾರಿಯನ್ನ ನಿಭಾಯಿಸುತ್ತಿದ್ದೇನೆ. ಬಿಜೆಪಿ ಅನಾವಶ್ಯಕವಾಗಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇಷ್ಟು ದಿನ ಗ್ಯಾರಂಟಿ ಆಯ್ತೂ, ಮುಡಾ, ಡಿಕೆ, ಚಲುವರಾಯಸ್ವಾಮಿ, ಕೃಷ್ಣಭೈರೇಗೌಡ ಆಯ್ತೂ. ಏನು ಇಲ್ವಲ್ಲವೆಂದು ಇದನ್ನ ತಕೊಂಡಿದ್ದಾರೆ ಎಂದು ಕಿಡಿಕಾರಿದರು.