ಮೂರನೇ ಬಾರಿಗೆ ಸಿಆರ್‌ಎಸ್ ಉಸ್ತುವಾರಿ: ಆದೇಶ ಹೊರಡಿಸಿದ ಸರ್ಕಾರದ ಅಧೀನ ಕಾರ್ಯದರ್ಶಿ

1 (1)
Published on

ಮಂಡ್ಯ: ನಿರೀಕ್ಷೆಯಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಜಿಲ್ಲಾ ಉಸ್ತುವಾರಿಯನ್ನು ನೀಡಲಾಗಿದೆ. ಇದರೊಂದಿಗೆ ಮೂರನೇ ಬಾರಿಗೆ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಂಡಂತಾಗಿದೆ.

ಜಿಲ್ಲಾ ಉಸ್ತುವಾರಿ ನೇಮಕ ಸಂಬಂಧ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿನಾಥ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ನೇಮಕದ ಬೆನ್ನಲ್ಲೇ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಜನರ ನಿರೀಕ್ಷೆಗಳು ಗರಿಗೆದರಿವೆ.

2004ರಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಚಲುವರಾಯಸ್ವಾಮಿ ಅವರು ಎನ್.ಧರ್ಮಸಿಂಗ್ ಸಂಪುಟದಲ್ಲಿ ಆರೋಗ್ಯ ಇಲಾಖೆ ಜತೆಗೆ ಜಿಲ್ಲಾ ಉಸ್ತುವಾರಿಯಾಗಿದ್ದರು. ಬಳಿಕ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಸಾರಿಗೆ ಇಲಾಖೆ ಜತೆಗೆ ಜಿಲ್ಲಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಇದೀಗ ಕೃಷಿ ಖಾತೆಯೊಂದಿಗೆ ಜಿಲ್ಲೆಯ ಉಸ್ತುವಾರಿಯ ಹೊಣೆ ನೀಡಲಾಗಿದೆ.

ರಾಜಕೀಯದ ಮೇಲಾಟದಿಂದಾಗಿ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಮಂಡ್ಯ ಜಿಲ್ಲೆಗೆ ಹೊಸ ರೂಪ ಕೊಡಬೇಕಾದ ಅನಿವಾರ್ಯತೆ ಇದೆ. ಅದರಂತೆ ಚಲುವರಾಯಸ್ವಾಮಿ ಸೇರಿದಂತೆ ಶಾಸಕರು ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಕಾರ್ಯಪ್ರೌವೃತ್ತರಾಗಿದ್ದಾರೆ. ಪ್ರಮುಖವಾಗಿ ಸಿಆರ್‌ಎಸ್ ಹಾಗೂ ಶಾಸಕರ ಮನವಿ ಮೇರೆಗೆ ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಗೆಂದು 50 ಕೋಟಿ ರೂ ಅನುದಾನವನ್ನು ಸರ್ಕಾರ ಮಂಜೂರು ಮಾಡಿದೆ. ಪ್ರಸ್ತುತ ಸರ್ಕಾರದಲ್ಲಿ ರಾಜ್ಯದಲ್ಲಿಯೇ ಇಷ್ಟೊಂದು ಪ್ರಮಾಣದ ಅನುದಾನ ಪಡೆದ ಮೊದಲ ಜಿಲ್ಲೆ ಮಂಡ್ಯವೇ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net