ಬೇಸಿಗೆ ಬೆಳೆ ನೀರೊದಗಿಸಲು ಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

District In-charge Minister N. Chaluvarayaswamy Speech Mandya
Published on

ಮಂಡ್ಯ: ಕಳೆದ ವರ್ಷ ದೇವರ ಕೃಪೆಯಿಂದ ಉತ್ತಮ ಮಳೆಯಾಗಿದೆ. ಅಂತೆಯೇ ಇದೇ ಮೊದಲ ಬಾರಿಗೆ ಅಂದರೆ 92 ವರ್ಷದ ಇತಿಹಾಸದಲ್ಲಿಯೇ ಕೃಷ್ಣರಾಜಸಾಗರ ಜಲಾಶಯವು ಒಂದು ವರ್ಷದಲ್ಲಿ ನಿರಂತರವಾಗಿ 154 ದಿನ ಭರ್ತಿಯಾಗಿದೆ. ಅದೇ ರೀತಿ ರೈತರ ಬೇಡಿಕೆ ಮತ್ತು ಅಪೇಕ್ಷೆಯಂತೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಬೇಸಿಗೆ ಹಾಗೂ ಬೆಳೆದು ನಿಂತಿರುವ ಬೆಳೆಗಳಿಗೆ ನೀರನ್ನು ನೀಡಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ ಪ್ರತಿಯೊಬ್ಬ ಭಾರತೀಯರಿಗೂ ಮಹತ್ವವಾದ ಮತ್ತು ಪವಿತ್ರವಾದ ದಿನ. ಎಲ್ಲ ಭಾರತೀಯರನ್ನು ಭಾವನಾತ್ಮಕವಾಗಿ, ಭಾಷಿಕವಾಗಿ, ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಬೆಸುಗೆ ಹಾಕಿದ ದಿನ. ಸಂವಿಧಾನ ರೂಪಿಸಿಕೊಟ್ಟ ಒಕ್ಕೂಟ ವ್ಯವಸ್ಥೆಯಡಿ, ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿದು ಅಭಿವೃದ್ಧಿಯನ್ನೇ ಮೂಲ ಮಂತ್ರವನ್ನಾಗಿಸಿಕೊಂಡು ಸಾಗುತ್ತಿರುವ ನಮ್ಮ ರಾಜ್ಯದ ಸಾಧನೆ ದೇಶದ ಅನೇಕ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.

ನಮ್ಮ ಸರ್ಕಾರದ ಮೂಲ ಧ್ಯೇಯ ಸಮಾನತೆ ಮತ್ತು ಸಾಮಾಜಿಕ ನ್ಯಾಯ. ಅದರಲ್ಲೂ ಜನ ಸಾಮಾನ್ಯರ ಮತ್ತು ಹಿಂದುಳಿದ ವರ್ಗದವರ ಕನಿಷ್ಟ ಅವಶ್ಯಕತೆಗಳನ್ನು ಪೂರೈಸುವ ಆಶಯವನ್ನು ನಮ್ಮ ಸರ್ಕಾರ ಹೊಂದಿದೆ. ಅರ್ಥಿಕ ಸಬಲೀಕರಣ, ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯೊಂದಿಗೆ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂಬ ಹೆಗ್ಗಳಿಕೆ ನಮ್ಮ ಸರ್ಕಾರಕ್ಕಿದೆ ಎಂದು ಹೇಳಿದರು.

ಮಂಡ್ಯದಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಕನ್ನಡಿಗರಲ್ಲಿ ಒಂದು ಬಗೆಯ ಸಂಚಲನ ಸೃಷ್ಟಿಸಿದೆ. ಸಮ್ಮೇಳನವನ್ನು ಯಶಸ್ವಿಯಾಗಿ ಮಾಡಿರುವ ಹಿನ್ನೆಲೆಯಲ್ಲಿ ಅದರ ಸವಿ ನೆನಪಿಗಾಗಿ, ಸಮ್ಮೇಳನದಲ್ಲಿ ಉಳಿತಾಯವಾದ ಮೊತ್ತ ಹಾಗೂ ಸರ್ಕಾರದಿಂದ ವಿಶೇಷ ಅನುದಾನವನ್ನು ಪಡೆದು, ಕನ್ನಡ ಭವನ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಂದಾಯ ಇಲಾಖೆಯ ಆಡಳಿತವನ್ನು ಸದೃಢಗೊಳಿಸುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಖಾಲಿ ಇರುವ 60 ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಯ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಮಿಮ್ಸ್‌ನಲ್ಲಿರುವ ಕ್ಯಾನ್ಸರ್ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಅಗತ್ಯವಿರುವ ವೈದ್ಯಕೀಯ ಉಪಕರಣ ಖರೀದಿಸಲು ಹಾಗೂ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಸೃಜನೆಗಾಗಿ ಅಗತ್ಯ ಕ್ರಮವಹಿಸಲಾಗುತ್ತಿದೆ. ಮಂಡ್ಯದಲ್ಲಿ ನೂತನ ಸಮಗ್ರ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಬೇಕೆನ್ನುವ ಬಹುದಿನಗಳ ಕನಸು ನನಸಾಗುವ ಹಂತ ತಲುಪಿದೆ. ಈ ನಿಟ್ಟಿನಲ್ಲಿ ಮಂಡ್ಯದಲ್ಲಿ ನೂತನ ಸಮಗ್ರ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಜಿಲ್ಲೆಯ ಜನರ ಬಹುದಿನಗಳ ಕನಸನ್ನು ಸಾಕಾರಗೊಳಿಸಿದ್ದಕ್ಕಾಗಿ ಮುಖ್ಯಮಂತ್ರಿ ಹಾಗೂ ಡಿಸಿಎಂ, ಸಂಪುಟದ ಸಹದ್ಯೋಗಿಗಳನ್ನು ವಿಶೇಷವಾಗಿ ಅಭಿನಂಧಿಸುತ್ತೇನೆ. ಮೈಷುಗರ್ ಕಾರ್ಖಾನೆಯ ಪುನಶ್ಚೇತನಕ್ಕಾಗಿ ಸರ್ಕಾರದಿಂದ ಕಳೆದ ವರ್ಷ 50 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿತ್ತು. ಕಾರ್ಖಾನೆ ಯಶಸ್ವಿಯಾಗಿ ಈ ವರ್ಷ 2,01,000 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಮೈಷುಗರ್‌ನಿಂದ ಬಹುದಿನಗಳಿಂದ ಬಾಕಿ ಇದ್ದ ವಿದ್ಯುತ್ ಬಿಲ್ ಬಾಕಿ ಮೊತ್ತ 54 ಕೋಟಿ ರೂಗಳನ್ನು ಮನ್ನಾ ಮಾಡಲಾಗಿದೆ. ಜಿಲ್ಲೆಯಲ್ಲಿ ಆಗಿರುವ ಸಾಧನೆಗಳೇ ಸರ್ಕಾರದ ಯಶಸ್ಸಿನ ಕೈಗನ್ನಡಿ. ಕಣ್ಣಿಗೆ ಕಾಣುವಂತಹ ಅಭಿವೃದ್ಧಿಗಳೇ ನಮಗೆ ಶ್ರೀರಕ್ಷೆ. ಅಭಿವೃದ್ಧಿಯೇ ನಮ್ಮ ಮಾತಾಗಬೇಕು ಎಂದು ನಂಬಿದ್ದೇನೆ. ಹೀಗಾಗಿ, ಜಿಲ್ಲೆಯಲ್ಲಿನ ಅಭಿವೃದ್ಧಿ ಚಿತ್ರಗಳು ಮುಂದಿನ ದಿನಗಳಲ್ಲಿ ಯಶಸ್ಸಿನ ಬಿಂದುಗಳಾಗಲಿವೆ ಎಂದು ಹೇಳಿದರು.

ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಿದರು. ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ನಗರಸಭೆ ಅಧ್ಯಕ್ಷ ಪ್ರಕಾಶ್, ಮುಡಾ ಅಧ್ಯಕ್ಷ ನಯೀಂ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸ್ಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net