ಮೀನುಗಾರರ ನಿಧನಕ್ಕೆ ಸಚಿವೆ ಲಕ್ಷ್ಮೀ ಕಂಬನಿ...

Laxmi
Published on

ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರದ ಭರವಸೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮುಗುಚಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಕಂಬನಿ ಮಿಡಿದಿದ್ದಾರೆ.

ಕಳೆದ ಮಂಗಳವಾರ ಮೀನುಗಾರರು ನಾಪತ್ತೆಯಾದ ಸುದ್ದಿ ತಿಳಿದ ತಕ್ಷಣವೇ ಜಿಲ್ಲಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯುತ್ತಲಿದ್ದೆ. ಆದರೆ, ಮೀನುಗಾರರು ಜೀವಂತವಾಗಿ ಇಲ್ಲದ ವಿಷಯ ತಿಳಿದು ತೀವ್ರ ದುಃಖವಾಗಿದೆ ಎಂದು ಸಚಿವೆ ಲಕ್ಷ್ಮೀ ತಿಳಿಸಿದ್ದಾರೆ.

ಶೀಘ್ರವೇ ಗಂಗೊಳ್ಳಿಗೆ ಭೇಟಿ

ದೋಣಿ ದುರಂತದಲ್ಲಿ ಮೃತಪಟ್ಟ ರೋಹಿತ ಖಾರ್ವಿ, ಸುರೇಶ ಖಾರ್ವಿ ಹಾಗೂ ಜಗನ್ನಾಥ ಖಾರ್ವಿ ಅವರ ಕುಟುಂಬದವರನ್ನು ಶೀಘ್ರವೇ ಭೇಟಿಯಾಗಿ ಸಾಂತ್ವನ ಹೇಳುತ್ತೇನೆ. ಸರ್ಕಾರದ ನಿಯಮಾನುಸಾರ ಕುಟುಂಬಸ್ಥರಿಗೆ ಪರಿಹಾರ ಒದಗಿಸುವ ಪ್ರಾಮಾಣಿಕ ಕೆಲಸ ಮಾಡಲಿದ್ದು, ಹೆಚ್ಚಿನ ಪರಿಹಾರ ಸಿಗುವಂತೆ ಮಾಡುತ್ತೇನೆ. ಕುಟುಂಬದ ಸದಸ್ಯರ ದುಃಖದಲ್ಲಿ ನಾನೂ ಭಾಗಿಯಾದ್ದು, ಅವರಿಗೆ ನೋವು ಸಹಿಸುವ ಶಕ್ತಿ ಲಭಿಸಲಿ. ಅಗಲಿದ ಆತ್ಮಗಳಿಗೆ ಭಗವಂತ ಶಾಂತಿ ನೀಡಲಿ. ಕುಟುಂಬಸ್ಥರು ಧೈರ್ಯ ಕಳೆದುಕೊಳ್ಳಬಾರದೆಂದು ವಿನಂತಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಜುಲೈ 17ರಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೀನುಗಾರಿಕೆಯೇ ತಮ್ಮ ಕಸುಬು ಆಗಿದ್ದರೂ ಸಹ ವಿಪರೀತ ಗಾಳಿ-ಮಳೆ ಇರುವ ಸಂದರ್ಭದಲ್ಲಿ ಕಡಲಿಗೆ ಇಳಿಯಬೇಡಿ. ಕರಾವಳಿ ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಹೋಗದಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು. ಮುನ್ನೆಚ್ಚರಿಕೆ ದೃಷ್ಟಿಯಿಂದ ಜಿಲ್ಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. | ಲಕ್ಷ್ಮೀ ಹೆಬ್ಬಾಳ್ಕರ್​. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net