

ಚಿಕ್ಕಮಗಳೂರು: ಪಂಚಕಸುಬುಗಳಲ್ಲಿ ನೈಪುಣ್ಯತೆ ಹೊಂದಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ವಿಶ್ವಕರ್ಮ ಗುರುಗಳು ತಾಂತ್ರಿಕತೆ ಪಿತಾಮಹ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಶ್ವಕರ್ಮ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇತಿಹಾಸದ ಕಾಲಘಟ್ಟಗಳನ್ನು ಅಧ್ಯಯನ ಮಾಡಿದಲ್ಲಿ ಬದಾಮಿ, ಹಂಪಿ, ಬೇಲೂರು, ಹಳೇಬೀಡು, ಅಜಂತಾ, ಎಲ್ಲೋರ ಸೇರಿ ದೇಶದಲ್ಲಿ ಶಾಸ್ತ್ರೋಕ್ತವಾಗಿ ನಿರ್ವಿುತಗೊಂಡಿರುವ ಬಹುತೇಕ ಪ್ರಸಿದ್ಧ ದೇವಾಲಯಗಳಲ್ಲಿ ಪೂರ್ವಜರ ತಾಂತ್ರಿಕ ನೈಪುಣ್ಯತೆ ಕಂಡು ಬರುತ್ತದೆ ಎಂದರು.
2 ಸಾವಿರ ವರ್ಷಗಳ ಹಿಂದೆ ದೆಹಲಿಯಲ್ಲಿ ನಿರ್ವಿುಸಿರುವ ಕಬ್ಬಿಣದ ಸ್ತಂಭ ಇಂದಿಗೂ ತುಕ್ಕು ಹಿಡಿಯದೆ ಇರುವುದು ಪೂರ್ವಿಕರ ತಂತ್ರಜ್ಞಾನ ಪ್ರಾವೀಣ್ಯತೆಗೆ ಸಾಕ್ಷಿ. ವಿಶ್ವಕರ್ಮರು ಇಂತಹ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಕರೊನಾದಿಂದ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದ್ದು ಅವರ ತಾಂತ್ರಿಕ ಕಲಾ ಬದುಕು ಇಂದಿನ ಸಮಾಜಕ್ಕೆ ಮಾದರಿಯಾಗಲಿ ಎಂದರು.
ಸಮುದಾಯದ ಜಿಲ್ಲಾಧ್ಯಕ್ಷ ಮಹೇಶ್ ಆಚಾರ್ ಮಾತನಾಡಿ, ಕರೊನಾ ಹಿನ್ನೆಲೆ ವಿಶ್ವಕರ್ಮ ಸಮುದಾಯದ ಕುಟುಂಬಗಳು ಆರ್ಥಿಕ ತೊಂದರೆಗೆ ಒಳಗಾಗಿದ್ದು ವಿಶ್ವಕರ್ಮ ನಿಗಮದಿಂದ ಪಡೆದಿರುವ ಸಾಲದ ಕಂತನ್ನು ಕಟ್ಟಲು ಕಷ್ಟಕರವಾಗಿರುವುದರಿಂದ ಸಾಲಮನ್ನಾ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸಿಡಿಎ ಅಧ್ಯಕ್ಷ ಸಿ.ಆನಂದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್, ವಿಶ್ವಕರ್ಮ ಅಭಿವೃದ್ಧಿ ನಿಗಮದ ಸದಸ್ಯ ರತೀಶ್, ಸಮುದಾಯದ ಉಪಾಧ್ಯಕ್ಷ ರಾಮಪ್ಪಾಚಾರ್, ಕಾರ್ಯದರ್ಶಿ ಉಮಾಶಂಕರ್, ಖಜಾಂಚಿ ಚಂದ್ರಶೇಖರ್, ಮಾಜಿ ಅಧ್ಯಕ್ಷ ರತ್ನಾಕರ್ ಪುರೋಹಿತ್, ರುದ್ರೇಶ್, ಪ್ರಸನ್ನ ಇತರರಿದ್ದರು.