

ಚಿಕ್ಕಮಗಳೂರು: ಪ್ರತಿಯೊಬ್ಬ ಶಿಕ್ಷಕ ಗುರುವಾಗಲು ತನ್ನನ್ನು ತಾನು ಪರಿಪೂರ್ಣತೆ ಕಡೆಗೆ ಒಯ್ಯಬೇಕು. ಆಗ ಮಾತ್ರ ಸಮಾಜ ಸಹ ಪರಿಪೂರ್ಣವಾಗಲು ಸಾಧ್ಯವಿದ್ದು, ಭಾರತೀಯ ಸಮಾಜದ ಅಪೇಕ್ಷೆಯೂ ಅದೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.
ಕುವೆಂಪು ಕಲಾಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಆಯೋಜಿಸಿದ್ದ ಜಿಲ್ಲಾ ಮಟ್ಟದ 59ನೇ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು. ಶಿಕ್ಷಣ ವ್ಯವಸ್ಥೆ ಸಮಗ್ರ ವಿಕಾಸದ ಸಮಷ್ಟಿ ಹಿತದ ಭಾವದಿಂದ ದೂರ ಸರಿದು ಬಹಳ ಕಾಲವಾಗಿದೆ. ಹಾಗಾಗಿ ಶಿಕ್ಷಣದಿಂದ ಯಾವ ಲಾಭ ಸಮಾಜ ಪಡೆಯಬೇಕಾಗಿತ್ತೋ ಅದು ಸಾಧ್ಯವಾಗಿಲ್ಲ. ಶಿಕ್ಷಣ ದ್ವೇಷದಿಂದ ಪ್ರೀತಿಯ ಕಡೆಗೆ, ಅಲ್ಪತನದಿಂದ ಅನಂತತೆ ಕಡೆಗೆ ಒಯ್ಯಬೇಕಿತ್ತು. ಹೆಚ್ಚು ಕಲಿತವರಲ್ಲಿ ಕೆಲವರನ್ನು ಹೊರತುಪಡಿಸಿದರೆ ಬಹಳಷ್ಟು ಜನರ ಆಲೋಚನೆ ಧಾಟಿ ಅಲ್ಪತನದ್ದೇ ಇದೆ. ಬಡವ, ಬಲ್ಲಿದ ಭೇದ ಮರೆಸಬೇಕಿತ್ತು. ಸ್ಪೃಶ್ಯ, ಅಸ್ಪೃಶ್ಯ ಭಾವದಿಂದ ಹೊರತರಬೇಕಿತ್ತು ಶಿಕ್ಷಣ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಸಮಗ್ರತೆ ಕಡೆಗೆ ಒತ್ತು ಕೊಟ್ಟಿರುವ ಅಂಶಗಳು ಸಾಕಷ್ಟಿವೆ. ಮುಂದಿನ 20 ವರ್ಷದ ನಂತರ ದೇಶ ಹೊಸ ಆಲೋಚನೆಯತ್ತ ಸಾಗುವ ಪೀಳಿಗೆ ಸೃಷ್ಟಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾತೃಭಾಷೆ ಈಗ ಮನೆಗಳಲ್ಲೇ ಕಳೆದು ಹೋಗುತ್ತಿದೆ. ಯಾವ ಭಾಷೆಯನ್ನಾದರೂ ಕಲಿಯೋಣ. ಆದರೆ ನಮ್ಮ ಭಾವನೆಯ ಮಾಧ್ಯಮ ಮಾತೃಭಾಷೆಯೇ ಆಗಿರಬೇಕು. ಇದರಿಂದ ಭಾಷೆ ಜತೆಗೆ ಸಂಸ್ಕೃತಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ಭಾಷೆ ಕಳೆದುಹೋದರೆ ಸಂಸ್ಕೃತಿ ಸಹ ಕಳೆದುಹೋಗುತ್ತದೆ ಎಂದು ಎಚ್ಚರಿಸಿದರು.