

ದೊಡ್ಡಬಳ್ಳಾಪುರ : ಗ್ರಾಮಾಂತರ ಜಿಲ್ಲಾಸ್ಪತ್ರೆಯನ್ನು ದೊಡ್ಡಬಳ್ಳಾಪುರದಲ್ಲೇ ನಿಮಾರ್ಣ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಗೃಹ ಕಚೇರಿಯಲ್ಲಿಶುಕ್ರವಾರ ಜಿಲ್ಲಾ ಆಸ್ಪತ್ರೆ ಹೋರಾಟ ಸಮಿತಿಯವರು ಆಸ್ಪತ್ರೆ ನಿಮಾರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರೂ ಕಾಮಗಾರಿ ವಿಳಂಬವಾಗುತ್ತಿದೆ. ಶೀಘ್ರ ಕಾಮಗಾರಿ ಪ್ರಾರಂಭ ಪೂರ್ಣಗೊಳಿಸಬೇಕು ಎಂದು ಜಿಲ್ಲಾಸ್ಪತ್ರೆ ಹೋರಾಟ ಸಮಿತಿ ಮುಖಂಡರು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದರು. ತಾಲೂಕಿನಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣ ಕುರಿತು ಸಂಬಂಧಿಸಿದ ಸಚಿವರು ಮತ್ತು ಅಧಿಕಾರಗಳ ಜತೆ ಮಾತನಾಡಿದ್ದೇನೆ. ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳಲು ಸರ್ಕಾರದಿಂದ ಅಗತ್ಯ ಸಹಕಾರ ಪಡೆಯಲಾಗುವುದು ಎಂದರು.
ಜಿಲ್ಲಾಸ್ಪತ್ರೆ ಹೋರಾಟ ಸಮಿತಿ ಮುಖಂಡ ಸಂಜೀವ್ ನಾಯಕ್ ಮಾತನಾಡಿ, 250 ಹಾಸಿಗೆಗಳ ಗ್ರಾಮಾಂತರ ಜಿಲ್ಲಾಸ್ಪತ್ರೆಯನ್ನು ದೊಡ್ಡಬಳ್ಳಾಪುರದ ಸಿದ್ಧೇನಾಯಕನಹಳ್ಳಿಯ ಸರ್ವೇ ನಂ.20ರಲ್ಲಿ ಒಟ್ಟು 9.38 ಎಕರೆ ಜಾಗದಲ್ಲಿ ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ್ದಾರೆ. ಜಿಲ್ಲಾಸ್ಪತ್ರೆಗೆ 6.8 ಎಕರೆ ಜಾಗ ಹೆಚ್ಚುವರಿ ಸೇರ್ಪಡೆ ಮಾಡಿ ಒಟ್ಟು 16 ಎಕರೆ ಜಮೀನಿನಲ್ಲಿ ಸುಸಜ್ಜಿತ ಜಿಲ್ಲಾಸ್ಪತ್ರೆ ಯೋಜನೆಗೆ ಒಟ್ಟು 192 ಕೋಟಿ ಅನುದಾನ ನಿಗದಿಪಡಿಸಿದೆ. ಆದರೆ ಜಿಲ್ಲಾಸ್ಪತ್ರೆ ನಿಮಾರ್ಣಕ್ಕೆ ಅನುದಾನ ಬಿಡುಗಡೆಯಾಗದೆ ವಿಳಂಬವಾಗುತ್ತಿದೆ. ಮತ್ತೊಂದೆಡೆ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಇಎಸ್ಐ ಆಸ್ಪತ್ರೆ ನಿಮಾರ್ಣವಾಗಿ ವರ್ಷಗಳೇ ಕಳೆದಿವೆ. ಆದರೆ ಉದ್ಘಾಟನೆ ಮಾತ್ರ ಆಗಿಲ್ಲ. ಜಿಲ್ಲಾಸ್ಪತ್ರೆ ಕಾಮಗಾರಿ ಪ್ರಾರಂಭಿಸಬೇಕು ಮತ್ತು ಇಎಸ್ಐ ಆಸ್ಪತ್ರೆ ಉದ್ಘಾಟನೆ ಆಗಬೇಕು ಎಂದರು.
ಆಸ್ಪತ್ರೆಗಳಿಂದ ದೊಡ್ಡಬಳ್ಳಾಪುರ ಮಾತ್ರವಲ್ಲದೇ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ಗೌರಿಬಿದನೂರು ಸೇರಿ ತಾಲೂಕಿನ ಜನರಿಗೆ ಉತ್ತಮ ಆರೋಗ್ಯ ಸೇವೆ ಲಭ್ಯವಾಗುತ್ತದೆ. ಅ.19 ರಂದು ದೊಡ್ಡಬಳ್ಳಾಪುರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಆಸ್ಪತ್ರೆಗೆ ಅನುದಾನ ಬಿಡುಗಡೆ ಮತ್ತು ಇಎಸ್ಐ ಆಸ್ಪತ್ರೆ ಉದ್ಘಾಟನೆ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಬೇಕು ಎಂದರು.