ಜಿಲ್ಲೆಯ ಬೀಚ್​ಗಳಲ್ಲಿ ಸುರಕ್ಷತೆಗೆ ಗೃಹರಕ್ಷಕದಳ ಸಿಬ್ಬಂದಿ ನೇಮಕ

udp-18-home guard
Published on

ಉಡುಪಿ: ಮುಂದಿನ ದಿನಗಳಲ್ಲಿ ಜಿಲ್ಲೆಯ ಕಡಲತೀರಗಳಲ್ಲಿ ಜೀವ ರಕ್ಷಕರಾಗಿ ಗೃಹರಕ್ಷಕದಳದವರನ್ನು ನಿಯೋಜಿಸಲಾಗುವುದು. ಇದಕ್ಕೆ ಪೂರಕವಾಗಿ ಈಜು ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಗೃಹರಕ್ಷಕ ದಳ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಚುನಾವಣೆ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಪೊಲೀಸ್​ ಇಲಾಖೆ ಜೊತೆಯಲ್ಲಿ ಆಂತರಿಕ ಭದ್ರತಾ ಕಾರ್ಯಗಳನ್ನು ಗೃಹ ರಕ್ಷಕ ದಳದವರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಲ್ಪೆ ಬೀಚ್​ನಲ್ಲಿ ಗೃಹ ರಕ್ಷಕ ದಳದವರು ನಿಷ್ಠೆಯಿಂದ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದರು.

ಗೃಹರಕ್ಷಕ ದಳದವರು ತಮ್ಮ ಕರ್ತವ್ಯವನ್ನು ನಿರ್ವಹಿಸುವುದರ ಜೊತೆಗೆ ತಮ್ಮ ಕುಟುಂಬ ವರ್ಗಕ್ಕೂ ಸಮಯ ಮೀಸಲಿಡಬೇಕು. ಮಕ್ಕಳ ವಿಧ್ಯಾಭ್ಯಾಸಕ್ಕೆ ಉತ್ತೇಜನ ನೀಡಬೇಕು. ಆರೋಗ್ಯದ ಕಾಳಜಿ ವಹಿಸಿ, ಕಾಲಕಾಲಕ್ಕೆ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸಮಾದೇಷ್ಟ ಡಾ. ರೋಶನ್​ ಕುಮಾರ್​ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದ.ಕ. ಜಿಲ್ಲಾ ಸಮಾದೇಷ್ಟ ಮುರಲೀ ಮೋಹನ್​ ಚೂಂತಾರ್​, ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಸಮಾದೇಷ್ಟೆ ನಸೀಮ್​ ತಾಜ್​, ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಸಮಾದೇಷ್ಟ ಡಾ. ಸಂಜು ಟಿ. ನಾಯಕ್​ ಮತ್ತಿತರರು ಉಪಸ್ಥಿತರಿದ್ದರು. ಸೆಕೆಂಡ್​ ಇನ್​ ಕಮಾಂಡ್​ ರಾಜೇಶ್​ ಕೆ.ಸಿ. ಸ್ವಾಗತಿಸಿ, ಘಟಕಾಧಿಕಾರಿ ಸ್ಟೀವನ್​ ಪ್ರಕಾಶ್​ ನಿರೂಪಿಸಿ, ಸಹಾಯಕ ಬೋಧಕ ಕರಿಬಸಪ್ಪ ವಂದಿಸಿದರು. ಅಧೀಕ್ಷಕ ರತ್ನಾಕರ ಎಂ. ವಿಜೇತರ ಹೆಸರು ವಾಚಿಸಿದರು.

ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗೃಹರಕ್ಷಕ ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಚಿಕ್ಕಮಗಳೂರು ತಂಡ ಸಮಗ್ರ ಪ್ರಶಸ್ತಿ ಗಳಿಸಿದೆ. ವೈಯಕ್ತಿಕ ಪುರುಷರ ವಿಭಾಗದಲ್ಲಿ ಸಂದೀಪ್​, ಮಹಿಳಾ ವಿಭಾಗದಲ್ಲಿ ಉಮಾ ಎನ್​.ಎಸ್​. ಪಡೆದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net