

ತಿ.ನರಸೀಪುರ: ಸಾರ್ವಜನಿಕರ ಬೇಡಿಕೆಯಂತೆ ಪಟ್ಟಣದ ತಾಲೂಕು ಆಸ್ಪತ್ರೆಯನ್ನು 100 ರಿಂದ 200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಪಿ.ಸಿ.ಕುಮಾರಸ್ವಾಮಿ ಭರವಸೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಬುಧವಾರ ದಲಿತ ಸಂಘರ್ಷ ಸಮಿತಿಯು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪಿ.ಸಿ.ಕುಮಾರಸ್ವಾಮಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು.
ಬಳಿಕ ಮಾತನಾಡಿ, ಸಮಿತಿಯಿಂದ ನೀಡಿರುವ ಎಲ್ಲ್ಲ ಬೇಡಿಕೆಗಳನ್ನು ಜಿಲ್ಲಾ ಮಟ್ಟದಲ್ಲೇ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸರ್ಕಾರದ ಹಂತದಲ್ಲಿ ಆಗುವ ಕೆಲಸಕ್ಕ್ಕೆ ಮೇಲಧಿಕಾರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿದ್ದು ಖಾಸಗಿ ಕ್ಲಿನಿಕ್ ನಡೆಸುತ್ತಿರುವ ವೈದ್ಯರ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಹಾಗೂ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳ ಮೂಲಕ ವರದಿ ತರಿಸಿಕೊಂಡು ಕ್ರಮ ವಹಿಸುವುದಾಗಿ ಇದೇ ವೇಳೆ ಎಚ್ಚರಿಕೆ ನೀಡಿದರು.
ಈಗಾಗಲೇ ನಾನು ಪಟ್ಟಣದ ತಾಲೂಕು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದು, ಆಸ್ಪತ್ರೆಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯ, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಿದ್ದು, ಸುಧಾರಣೆಗೆ ಕ್ರಮ ವಹಿಸಿದ್ದೇನೆ. ಇನ್ನು ಹೆಚ್ಚಿನ ರೀತಿಯಲ್ಲಿ ಜನರ ಬೇಡಿಕೆಗಳಿಗೆ ಪೂರಕವಾಗಿ ಬೇಕಿರುವ ಎಲ್ಲ ಕ್ರಮಗಳನ್ನು ವಹಿಸುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆಲಗೂಡು ಎಸ್ ಚಂದ್ರಶೇಖರ್, ಸರ್ಕಾರಿ ಅಸ್ಪತ್ರೆಯ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುತ್ತಿದ್ದು, ಇಲ್ಲಿಗೆ ಬರುವ ರೋಗಿಗಳನ್ನು ತಮ್ಮ ಕ್ಲಿನಿಕ್ ಬರುವಂತೆ ಹೇಳಿ ಹೆಚ್ಚಿನ ಹಣ ಸುಲಿಗೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಈ ಕ್ಷೇತ್ರದಲ್ಲಿ ಜನರಿಗೆ ಅಗತ್ಯ ಸೌಲಭ್ಯ ಚಿಕಿತ್ಸೆ ಸಿಗುತ್ತಿಲ್ಲ. ತಾಯಿ-ಮಗು ಆಸ್ಪತ್ರೆ, ಡಯಾಲಿಸಿಸ್ ಘಟಕಗಳಲ್ಲಿ ಹೆಚ್ಚುವರಿ ಉಪಕರಣಗಳ ಅಳವಡಿಸಬೇಕು. ಶವಾಗಾರದಲ್ಲಿ ಎರಡು ಮೂರು ಶವಗಳು ಒಟ್ಟಿಗೆ ಬಂದರೆ ಏಕಕಾಲದಲ್ಲಿ ಮರಣೋತ್ತರ ಪರೀಕ್ಷೆ ಅಸಾಧ್ಯವಾಗಿದ್ದು, ತುರ್ತಾಗಿ ಶವಾಗಾರ ದುರಸ್ತಿಯಾಗಬೇಕು ಎಂದು ಒತ್ತಾಯಿಸಿದರಲ್ಲದೆ, ಬಡವರಿಗೆ ಸೂಕ್ತ ಚಿಕಿತ್ಸೆ ಸಿಗಲು ಹೆಚ್ಚಿನ ಸೌಲಭ್ಯ ಒದಗಿಸಬೇಕು ಡಿಎಚ್‌ಒ ಅವರಿಗೆ ಮನವರಿಕೆ ಮಾಡಿದರು.
ಈ ವೇಳೆ ಡಿಎಚ್‌ಒ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೆ ತಾವು (ಡಿಎಚ್‌ಒ)ಬರುವುದು ತಡ ಮಾಡಿರುವುದಾಗಿ ಆರೋಪಿಸಿದಲ್ಲದೆ, ನಾಳೆಯೂ ಪ್ರತಿಭಟನೆ ಮುಂದುವರಿಯಲಿದೆ. ನೀವು ಬಂದು ಮನವಿ ಸ್ವೀಕರಿಸಿ ಭರವಸೆ ನೀಡಿದ ಬಳಿಕ ಪ್ರತಿಭನೆ ಹಿಂಪಡೆಯುವುದಾಗಿ ಸಮಿತಿ ಸದಸ್ಯರು ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್ ಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಜಗನ್ನಾಥ್, ಡಾ.ದಯಾನಂದಬಾಬು, ರಜಿನಿ, ಕನ್ನಾಯಕನಹಳ್ಳಿ ಮರಿಸ್ವಾಮಿ ಇತರರು ಇದ್ದರು.