ಜಿಲ್ಲಾ ಆರೋಗ್ಯ ಸಂಘದ ಸಭೆ ಬಾಲ್ಯ ವಿವಾಹ ಪ್ರಕರಣಗಳು ಶೂನ್ಯಕ್ಕಿಳಿಯಲಿ: ಜಿಪಂ ಸಿಇಓ

raichur
raichur
Published on

 ರಾಯಚೂರು ಕುಟುಂಬದ ಜವಾಬ್ದಾರಿ, ಹೆರಿಗೆ, ಮಕ್ಕಳ ಲಾಲನೆ-ಪಾಲನೆ, ವೈಯಕ್ತಿಕ ಆರೋಗ್ಯ ನಿರ್ವಹಣೆಯನ್ನು ನಿಭಾಯಿಸಲು ಮಹಿಳೆಗೆ ಮಾನಸಿಕ ಸದೃಢತೆ ಮುಖ್ಯವಾಗಿದೆಂದು ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಜಿಪಂ ಸಿಇಓ ಈಶ್ವರ ಕುಮಾರ ಕಾಂದೂ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಾಲ್ಯವಿವಾಹದಿಂದ ಮಕ್ಕಳಿಗೆ ಮೇಲಿಂದ ಮೇಲೆ ಕಾಯಿಲೆಗಳ ಬರುವಿಕೆ, ಅಕಾಲಿಕ ಗರ್ಭಪಾತ, ಕೊರಳಿಗೆ ಹೊಕ್ಕಳು ಬಳ್ಳಿ ಸುತ್ತಿ ಮಗು ಜನಿಸುವುದು, ಶಿಶು ಮರಣ, ತಾಯಿ ಮರಣ, ಮುಂತಾದವುಗಳ ಜತೆಗೆ ಕಾನೂನಾತ್ಮಕವಾಗಿ ಶಿಕ್ಷೆ ಇರುವ ಕುರಿತು ಸಾರ್ವಜನಿಕರಿಗೆ ತಿಳಿಹೇಳಬೇಕು. ರಾಯಚೂರು ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಶೂನ್ಯಕ್ಕಿಳಿಯಬೇಕು ಎಂದು ಸೂಚನೆ ನೀಡಿದರು.

ಹೆರಿಗೆ ನಂತರದಲ್ಲಿ ನವಜಾತ ಶಿಶುವಿಗೆ 12 ಮಾರಕ ರೋಗಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗುವ ಲಸಿಕೆಗಳನ್ನು ತೋಟದ ಮನೆಗಳು, ದೊಡ್ಡಿ, ಹಟ್ಟಿ, ತಾಂಡಾ, ಕ್ಯಾಂಪ್‌ಗಳಲ್ಲಿ ತಪ್ಪದೇ ನೀಡಬೇಕು. ಯಾರಾದರೂ ತಪ್ಪು ನಂಬಿಕೆ ಹೊಂದಿದ ಪಾಲಕರು ಇದ್ದರೆ ಅವರಿಗೆ ಸರಿಯಾಗಿ ಮನವರಿಕೆ ಮಾಡಿ ಲಸಿಕೆ ಹಾಕಿಸಲು ಸೂಚಿಸಿದರು.

ಕಡಿಮೆ ತೂಕದ ಮಕ್ಕಳನ್ನು ಅಭಿಯಾನದ ರೂಪದಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಜಂಟಿಯಾಗಿ ಗುರುತಿಸಿ ವೈದ್ಯಕೀಯ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರ ಒದಗಿಸುವ ಹಾಗೂ ಅಪೌಷ್ಟಿಕ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆಸೂಚಿಸಿದರು.

ಹಾವು ಕಡಿತ, ನಾಯಿ ಕಡಿತ ಕುರಿತು ಹೆಚ್ಚಿನ ಜಾಗೃತಿ ನೀಡುವ ಜತೆಗೆ ಲಸಿಕೆಗಳನ್ನು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಮಾಡಬೇಕು. ಡೆಂಗ್ಯು ರೋಗ ನಿಯಂತ್ರಣಕ್ಕಾಗಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು. ಮಲೇರಿಯಾ, ಜೆಇ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕು. ರಕ್ತದಾನದ ಮಹತ್ವ ಕುರಿತು ತಿಳಿಸಲು ಮತ್ತು ಜಿಲ್ಲೆಯಲ್ಲಿ ರಕ್ತ ಕೊರತೆಯಾಗದಿರಲು ಕ್ರಿಯಾ ಯೋಜನೆ ಹಾಕಿಕೊಂಡು ಸತತವಾಗಿ ರಕ್ತದಾನ ಶಿಬಿರ ಏರ್ಪಡಿಸಬೇಕೆಂದರು.

ನಂತರ ಡೆಂಗ್ಯು ರೋಗ ತಡೆಗೆ ಜಾಗೃತಿ ನೀಡಲು ಭಿತ್ತಿ ಪತ್ರವನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಡಿಎಚ್‌ಓ ಡಾ.ಸುರೇಂದ್ರ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಶಂಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನವೀನ್‌ಕುಮಾರ್, ಡಾ.ಶಂಕರಗೌಡ, ಸಮಿತಿ ಸದಸ್ಯ ಕಾರ್ಯದರ್ಶಿ ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ ,ಡಾ.ಗಣೇಶ್, ಡಾ.ಶಿವಕುಮಾರ, ಡಾ.ಮಹಮ್ಮದ್ ಶಾಕೀರ್,ಡಾ.ಚಂದ್ರಶೇಖರಯ್ಯ ಸ್ವಾಮಿ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net