

ಮಂಡ್ಯ: ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯ 4,48,769 ಅರ್ಹ ಮಹಿಳೆಯರಿಗೆ 2024 ಜನವರಿಯಿಂದ 2025 ಜನವರಿವರೆಗೆ 1157.62 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫೆಬ್ರವರಿ ಹಾಗೂ ಮಾರ್ಚ್ ಮಾಹೆಯ ಗೃಹಲಕ್ಷ್ಮೀ ಯೋಜನೆ ಹಣವನ್ನು ಡಿ.ಬಿ.ಟಿ ಮೂಲಕ ಪಾವತಿಸಲು ಕ್ರಮ ವಹಿಸಲಾಗಿದೆ. 1,374 ಫಲಾನುಭವಿಗಳು ಐ.ಟಿ/ಜಿ.ಎಸ್.ಟಿ ತೆರಿಗೆದಾರರಲ್ಲ ಎಂಬ ಮಾಹಿತಿ ಸಂಗ್ರಹಿಸಿ ಕಳುಹಿಸಿಕೊಡಲಾಗಿದೆ. ಜಿಲ್ಲೆಯಲ್ಲಿ ಶೇ 99.61ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ವರ್ಗಾವಣೆಯಾಗುತ್ತಿದೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 4,47,166 ಫಲಾನುಭವಿಗಳಿದ್ದಾರೆ. ಅಂತೆಯೇ ಡಿಸೆಂಬರ್ ಮಾಹೆಯಲ್ಲಿ 23.35 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದ್ದು, 402.06 ಕೋಟಿ ರೂ ಅನುದಾನವನ್ನು ಜಿಲ್ಲೆಯ ಅರ್ಹ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಫೆಬ್ರವರಿ ಮಾಹೆಯಿಂದ ನೇರ ನಗದು ಬದಲು ಅಕ್ಕಿ ವಿತರಿಸಲಾಗುತ್ತಿದೆ. ಮರಣ ಹೊಂದಿರುವ ಕೆಲವು ವ್ಯಕ್ತಿಗಳ ಹೆಸರು ಪಡಿತರ ಚೀಟಿಯಲ್ಲಿ ಮುಂದುವರೆದಿದ್ದು, ಗ್ರಾಮ ಪಂಚಾಯಿತಿ ಅಥವಾ ಗ್ರಾಮ ಲೆಕ್ಕಿಗರಿಂದ ಮರಣ ಹೊಂದಿರುವವರ ಮಾಹಿತಿ ಪಡೆದು ಪಡಿತರ ಚೀಟಿಯಿಂದ ಅವರ ಹೆಸರು ಕೈ ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಏಪ್ರಿಲ್ ಮಾಹೆಯಲ್ಲಿ ಒಟ್ಟು 64.08 ಲಕ್ಷ ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡಲಾಗಿದ್ದು, ಇದರಿಂದ ಸಾರಿಗೆ ನಿಗಮಕ್ಕೆ 20.93 ಕೋಟಿ ರೂ ಆದಾಯ ಗಳಿಸಿದೆ. ಜಿಲ್ಲೆಯಲ್ಲಿ 495 ಬಸ್‌ಗಳಿವೆ. ಅಂತೆಯೇ ರಾಜ್ಯಸರ್ಕಾರ 2 ಸಾವಿರ ಬಸ್ ಖರೀದಿಗೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಯಾರಿಗೂ ತೊಂದರೆಯಾಗದಂತೆ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 5,22,674 ಕುಟುಂಬ ನೋಂದಣಿಯಾಗಿದ್ದು, 2023 ಆಗಸ್ಟ್‌ನಿಂದ 2025 ಏಪ್ರಿಲ್ ಮಾಹೆಯವರೆಗೆ 40.52 ಕೋಟಿ ರೂ ವಿದ್ಯುತ್ ಯುನಿಟ್ ಬಳಕೆಯಾಗಿದೆ. ಇದಕ್ಕಾಗಿ ಸರ್ಕಾರ 347.55 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶೇ.97.11ರಷ್ಟು ಜನರು ಗೃಹಜ್ಯೋತಿ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಯುವ ನಿಧಿ ಯೋಜನೆಯಡಿ 4,702 ಫಲಾನುಭವಿಗಳಿದ್ದಾರೆ. ಈವರೆಗೆ ಅರ್ಹ ಫಲಾನುಭವಿಗಳಿಗೆ 7.12 ಕೋಟಿ ರೂಗಳನ್ನು ಡಿ.ಬಿ.ಟಿ ಯ ಮೂಲಕ ಪಾವತಿಸಲಾಗಿದೆ. ಜನವರಿ ಹಾಗೂ ಫೆಬ್ರವರಿ ಮಾಹೆಯ ಹಣ ಈಗಾಗಲೇ ಫಲಾನುಭವಿಗಳ ಖಾತೆಗೆ ಜಮೆಯಾಗಿದ್ದು, ಮಾರ್ಚ್ ತಿಂಗಳ ಹಣವನ್ನು ಶೀಘ್ರವೇ ಫಲಾನುಭವಿಗಳಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಯೋಜನಾಧಿಕಾರಿ ಧನುಷ್, ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಪ್ರಾಧಿಕಾರದ ಉಪಾಧ್ಯಕ್ಷರಾದ ಕೆ.ಸಿ.ಪ್ರಶಾಂತ್‌ಬಾಬು, ಎಸ್.ಎಚ್.ರಾಜೇಂದ್ರ, ಶಿವಣ್ಣ, ಸದಸ್ಯರಾದ ಬಿ.ಪಿ.ಅಜಯ್‌ಕುಮಾರ್, ಎನ್.ಬಿ.ಕುಮಾರ, ವೀಣಾ, ಮೊಹಮ್ಮದ್ ಅನ್ಸರ್, ಪಿ.ಮಾದೇಶ ಇತರರಿದ್ದರು.