

ಮಂಡ್ಯ: ಸ್ವರ್ಣ ಫುಟ್‌ಬಾಲ್ ಅಭಿವೃದ್ದಿ ಸಂಸ್ಥೆ, ಜಿಲ್ಲಾ ಫುಟ್‌ಬಾಲ್ ಸಂಸ್ಥೆ-ಪೂರ್ವ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಅ.8ರಿಂದ 15 ರವರೆಗೆ ರಾಜ್ಯಮಟ್ಟದ ‘ಮುನ್ನ ಕಪ್’ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಫುಟ್‌ಬಾಲ್ ಸಂಸ್ಥೆ-ಪೂರ್ವ ಅಧ್ಯಕ್ಷ ಎ.ನಾಗರಾಜು ತಿಳಿಸಿದರು.
ನಗರದ ಗುತ್ತಲು ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಬಿ.ಜಿ.ದಾಸೇಗೌಡ ಕ್ರೀಡಾಂಗಣದಲ್ಲಿ 8ರಂದು ಸಂಜೆ 4 ಗಂಟೆಗೆ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷರೂ ಆದ ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಟೂರ್ನಿಗೆ ಚಾಲನೆ ನೀಡಲಿದ್ದು, ಶಾಸಕ ರವಿಕುಮಾರ್ ಗಣಿಗ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್ ಭಾಗವಹಿಸಲಿದ್ದಾರೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
15ರಂದು ಸಂಜೆ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಹುಮಾನ ವಿತರಿಸಲಿದ್ದು, ವಸತಿ ಸಚಿವ ಜಮೀರ್ ಅಹಮದ್‌ಖಾನ್ ಸಮಾರೋಪ ಭಾಷಣ ಮಾಡಲಿದ್ದಾರೆ. ಶಾಸಕರಾದ ತನ್ವೀರ್ ಸೇಠ್, ರವಿಕುಮಾರ್ ಗಣಿಗ, ರಾಜ್ಯ ಫುಟ್‌ಬಾಲ್ ಸಂಸ್ಥೆ ಗೌರವ ಕಾರ್ಯದರ್ಶಿ ಎಂ.ಕುಮಾರ್, ಖಜಾಂಚಿ ಬಿ.ಕೆ.ಮುನಿರಾಜ್ ಪಾಲ್ಗೊಳ್ಳಲಿದ್ದಾರೆ ಎಂದರು.
ಟೂರ್ನಿಯಲ್ಲಿ 16 ತಂಡ ಭಾಗವಹಿಸಲಿದ್ದು, ಪ್ರತಿ ದಿನ 2 ಪಂದ್ಯಾವಳಿಯಂತೆ 8 ದಿನ ಕ್ರೀಡಾಕೂಟ ನಡೆಯಲಿದೆ. ಪ್ರಥಮ ಬಹುಮಾನವಾಗಿ 25 ಸಾವಿರ ರೂ, ದ್ವಿತೀಯ 15 ಸಾವಿರ ರೂ ನಗದು ಪುರಸ್ಕಾರ ಹಾಗೂ ಭಾಗವಹಿಸುವ ಎಲ್ಲ ತಂಡದ ಆಟಗಾರರಿಗೆ ದಿನ ಭತ್ಯೆ ಹಾಗೂ ಪ್ರವಾಸ ಭತ್ಯೆ ನೀಡಲಾಗುವುದೆಂದು ವಿವರಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಮುನಾವರ್ ಪಾಷ, ಕಾರ್ಯದರ್ಶಿ ವೇಣುಗೋಪಾಲ್, ವಿಶೇಷ ಪ್ರತಿನಿಧಿ ಬಿ.ವೆಂಕಟ್, ಟಿ.ವರಪ್ರಸಾದ್, ಮೀರ್ ಹನೀಪ್ ಇದ್ದರು.