ಕಾನೂನು ಉಲ್ಲಂಘಿಸಿ ಕಾವೇರಿ ಆರತಿ: ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಅಸಮಾಧಾನ

District Farmers Welfare Committee press conference Mandya
Published on

ಮಂಡ್ಯ: ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರ ಜತೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದರೂ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕೆಆರ್‌ಎಸ್ ಅಣೆಕಟ್ಟೆ ಸಮೀಪ ಪ್ರಾಯೋಗಿಕವಾಗಿ ಕಾವೇರಿ ಆರತಿ ಮಾಡಿದ್ದಾರೆ. ಈ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಕಾವೇರಿ ನೀರಾವರಿ ನಿಗಮದ ಮೂಲಕ 13 ಜನ ಪುರೋಹಿತರಿಂದ ಕಾವೇರಿ ಆರತಿ ಮಾಡಿದೆ. ಇದು ಜಿಲ್ಲೆಯ ಜನರಿಗೆ ಮಾಡಿದ ದ್ರೋಹ. ಅಣೆಕಟ್ಟೆ ನಿಷೇಧಿತ ಪ್ರದೇಶವಾಗಿದೆ. ಜತೆಗೆ ಪ್ರವಾಸೋಧ್ಯಮ ಚಟುವಟಿಕೆಯನ್ನು ಅಣೆಕಟ್ಟೆ ಬಳಿ ಮಾಡಬಾರದು. ಅಂತೆಯೇ ಕಾವೇರಿ ಆರತಿ ಸಂಬಂಧ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ಇದ್ದರೂ ಆಡಳಿತಾರೂಢ ಜನಪ್ರತಿನಿದಿಗಳು ಮತ್ತು ಅಧಿಕಾರಿ ವರ್ಗ ಕಾನೂನಿಗೆ ಭಂಗ ತರುವ ಕೆಲಸದ ಜತೆಗೆ ನ್ಯಾಯಾಲಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಕೆ.ಆರ್‌ಎಸ್‌ನಲ್ಲಿ ಕಾವೇರಿ ಆರತಿ ಮಾಡುತ್ತಿದ್ದರೂ ಜಿಲ್ಲಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಜನಪ್ರತಿನಿಧಿಗಳ ಮುಖವಾಣಿಗಳಾಗಿ ಕೆಲಸ ಮಾಡುತ್ತಿದ್ದಾರೆ. ನಾವು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೆ ಮಾಡುತ್ತೇವೆ ಎನ್ನುತ್ತಾರೆಯೇ ವಿನಃ ಇಂತಹ ಕಾನೂನು ಬಾಹಿರ ಕೃತ್ಯಗಳನ್ನು ತಡೆಯುವಲ್ಲಿ ವಿಲರಾಗಿದ್ದಾರೆ ಎಂದು ಕಿಡಿಕಾರಿದರು.

ಮೈಶುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದ ಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿ ಅದಕ್ಕೆ ಅನುದಾನ ನೀಡಿದ್ದರು. ಇದೀಗ ಮತ್ತೆ 60 ಕೋಟಿ ರೂ ಅನುದಾನ ಘೋಷಿಸಿದ್ದಾರೆ. ಆದರೆ ಅಲ್ಲಿನ ಆಡಳಿತ ಮಂಡಳಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದಾಗಿ ಕಾರ್ಖಾನೆಯ ಅವ್ಯವಸ್ಥೆಯ ಆಗರವಾಗಿದೆ. ಹಾವು ಬಂದಿತೆಂದು ಮರ ಕಡಿಯುವುದು, ಎಚ್ಚರಿಕೆ ನೀಡಿದ್ದರೂ ಮಲಾಸಸ್ ದಾಸ್ತಾನು ಸಂಗ್ರಹ ಮಾಡಿ ಕೋಟ್ಯಂತರ ರೂ. ನಷ್ಟ ಉಂಟುಮಾಡುವ ಮೂಲಕ ತೆರಿಗೆದಾರರ ಹಣವನ್ನು ಪೋಲು ಮಾಡಿದ್ದಾರೆ. ಇದಕ್ಕೆ ಕಾರ್ಖಾನೆ ಅಧ್ಯಕ್ಷರೇ ನೇರ ಹೊಣೆಗಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಬಿ.ಶಿವಕುಮಾರ್ ಮಾತನಾಡಿ, ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿನ ಆಡಳಿತ ಸುಧಾರಣೆ ಮಾಡಿ ಅಭಿವೃದ್ಧಿಗೆ ಒತ್ತು ನೀಡಲಿ. ಇಲ್ಲದಿದ್ದರೆ ಅವರನ್ನು ಪ್ರಶ್ನೆ ಕೇಳುವ ಕೆಲಸವನ್ನು ರೈತರೊಂದಿಗೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ಹಿರಿಯ ಉಪಾಧ್ಯಕ್ಷರಾದ ಕೆ.ಬೋರಯ್ಯ, ಎಂ.ಬಿ.ಬೋರೇಗೌಡ, ಇಂಡುವಾಳು ಚಂದ್ರಶೇಖರ್, ಎಂ.ವಿ.ಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net