

ವಿಜಯವಾಣಿ ಸುದ್ದಿಜಾಲ ಉಡುಪಿ
ಕೃಷಿ ಕ್ಷೇತ್ರ ಉನ್ನತಿ ಹೊಂದಲು ಸೂಕ್ತ ಮಾರುಕಟ್ಟೆ ಇರಬೇಕು. ಇಲ್ಲದಿದ್ದಲ್ಲಿ ರೈತರು ಉಳಿಯಲು ಸಾಧ್ಯವಿಲ್ಲ. ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ಲಭಿಸಿದರೆ ಮಾತ್ರ ಕೃಷಿ ಕ್ಷೇತ್ರಕ್ಕೆ ಉಳಿವು, ಪ್ರಗತಿ ಕಾಣಲು ಸಾಧ್ಯ. ಇಂತಹ ರೈತ ಸಮಾವೇಶಗಳು ಹಳ್ಳಿಗಳಿಗೂ ತಾಂತ್ರಿಕತೆ ಒದಗಿಸಿ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಬೇಕು ಎಂದು ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯ ಎಸ್.ನಾಗರಾಜ ಕೆದ್ಲಾಯ ಆಶಯ ವ್ಯಕ್ತಪಡಿಸಿದರು.
ಜಿಲ್ಲೆಯ ಸಾಧಕ ಕೃಷಿಕರಾದ ಶ್ರೀನಿವಾಸ ಆಚಾರ್ಯ ಬೈಲೂರು, ಲಾರೆನ್ಸ್ ಆಳ್ವ ಮೂಡುಬೆಳ್ಳೆ, ಕಮಲಾ ಪೂಜಾರಿ ಮೂಡುಪೆರಂಪಳ್ಳಿ, ಸತ್ಯಶಂಕರ ಶೆಟ್ಟಿ ಸಚ್ಚೇರಿಪೇಟೆ, ವಾಸುದೇವ ಪ್ರಭು ಹಿರಿಯಡ್ಕ, ರಾಜೇಶ್ ಪೂಜಾರಿ, ಪ್ರೇಮಾನಂದ ಕುಲಾಲ್ ಹೊರನಾಡಿ ಅವರನ್ನು ಸನ್ಮಾನಿಸಲಾಯಿತು.
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ವಿಶ್ವನಾಥ್ ಶೆಣೈ, ಕರ್ಣಾಟಕ ಬ್ಯಾಂಕ್ನ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ವಾದಿರಾಜ ಭಟ್ ಕೆ., ಪೆರಂಪಳ್ಳಿ ಎಡ್ಮೇರಿ ಬೊಬ್ಬರ್ಯ ದೈವಸ್ಥಾನದ ಆಡಳಿತ ಮೊಕ್ತೇಸರ ಪಿ.ಎನ್. ಶಶಿಧರ್ ರಾವ್, ಈಸೀ ಲೈಫ್ನ ರವಿನಾರಾಯಣ, ಎಸ್ಆರ್ಕೆ ಲ್ಯಾಡರ್ಸ್ ಮಾಲೀಕ ಕೇಶವ ಆಮೈ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆ ವಹಿಸಿದ್ದರು. ಸಂದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ ವರದಿ ಮಂಡಿಸಿದರು. ಭಾರತಿ ಶೆಟ್ಟಿ ವಂದಿಸಿದರು.
ಸಮಾವೇಶದಲ್ಲಿ ಪಾಲ್ಗೊಂಡಿದ್ದ ರೈತರಿಗಾಗಿ ವೈಜ್ಞಾನಿಕವಾಗಿ ಅಡಕೆ ಬೆಳೆಯುವ ಕ್ರಮದ ಕುರಿತು ವಲಯ ತೋಟಗಾರಿಕಾ ಮತ್ತು ಕೃಷಿ ಸಂಶೋಧನಾ ಕೇಂದ್ರ ಬ್ರಹ್ಮಾವರದ ಸಹ ಸಂಶೋಧನಾ ನಿರ್ದೇಶಕ ಡಾ. ಧನಂಜಯ, ಆರೋಗ್ಯ ನೆಮ್ಮದಿಗಾಗಿ ಕೃಷಿ ಕುರಿತು ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಲಾಭದಾಯಕ ಕೃಷಿಗೆ ವಿವಿಧ ತಂತ್ರಜ್ಞಾನ ಕುರಿತು ಬ್ರಹ್ಮಾವರ ಕೃಷಿ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಲಕ್ಷ್ಮಣ್, ಹೈನುಗಾರಿಕೆಯಲ್ಲಿ ಕೃತಕ ಗರ್ಭಧಾರಣೆಯ ಸವಾಲು ಕುರಿತು ಮಣಿಪಾಲದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಪ್ರಶಾಂತ ಶೆಟ್ಟಿ, ಭತ್ತದ ಇಳುವರಿ ಹೆಚ್ಚಿಸುವ ವಿಧಾನ ಕುರಿತು ಕೃಷಿ ಸಂಶೋಧನಾ ಕೇಂದ್ರ ಬ್ರಹ್ಮಾವರದ ಡಾ.ಸುಧೀರ್ ಕಾಮತ್, ಆಹಾರ ಪದ್ಧತಿ ಮತ್ತು ಮಧುಮೇಹ ಕುರಿತು ಡಾ. ಶ್ರುತಿ ಬಲ್ಲಾಳ್ ಉಪನ್ಯಾಸ ನೀಡಿದರು. ತೋಟಗಾರಿಕಾ ಇಲಾಖೆ ಹಾಗೂ ವಿದ್ಯುತ್ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಆಧುನಿಕ ಕೃಷಿ ಪರಿಕರಗಳು, ಹೊಸ ಯಂತ್ರೋಪಕರಣ ಪ್ರದರ್ಶನ ಮತ್ತು ಮಾರಾಟ ಮಳಿಗೆ, ಸುಧಾರಿತ ತಂತ್ರಜ್ಞಾನದಿಂದ ಬೆಳೆಸಿದ ವಿವಿಧ ಗಿಡ-ಬೀಜ, ಕೃಷಿ ಸಂಬಂಧಿತ ಪುಸ್ತಕ ಮಳಿಗೆ ತೆರೆಯಲಾಗಿತ್ತು.