ಆ ಮಹಿಳೆಯನ್ನು ಪಲ್ಲಂಗಕ್ಕೆ ಕರೆದಿಲ್ಲ... ಇದೊಂದು ಷಡ್ಯಂತ್ರ

dvg channabasappa
Published on

ದಾವಣಗೆರೆ: 'ಗಂಡ-ಹೆಂಡ್ತಿ ಸಮಸ್ಯೆ ಬಗೆಹರಿಸಿ ಅಂದ್ರೆ ಪಲ್ಲಂಗಕ್ಕೆ ಕರೀತಾರೆ' ಎಂದು ರೈತ ಸಂಘದ ಜಿಲ್ಲಾಧ್ಯಕ್ಷರ ವಿರುದ್ಧ ಆರೋಪಿಸಿ ಇತ್ತೀಚೆಗೆ ಮಾಧ್ಯಮಗಳ ಎದುರು ಮಹಿಳೆಯೊಬ್ಬರು ಕಣ್ಣೀರಿಟ್ಟಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾಧ್ಯಕ್ಷ ಚನ್ನಬಸಪ್ಪ, 'ನನ್ನ ತೇಜೋವಧೆ ಮಾಡಲೆಂದೇ ಮಹಿಳೆ ಸುಳ್ಳು ಆರೋಪ ಮಾಡಿದ್ದಾರೆ. ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಎಸ್​ಪಿ ಮತ್ತು ಐಜಿ ಅವರಿಗೆ ದೂರು ನೀಡುವೆ' ಎಂದು ಎಚ್ಚರಿಸಿದ್ದಾರೆ.

'ಆ ಮಹಿಳೆಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಒಮ್ಮೆ ಫೋನ್​ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದರು. ಗಂಡ-ಹೆಂಡ್ತಿ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗಿ ಎಂದು ಹೇಳಿದ್ದೆ ಅಷ್ಟೆ. ಅವರೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ. ಕೆಲ ಕಿಡಿಗೇಡಿಗಳು ನನ್ನ ತೇಜೋವಧೆ ಮಾಡಲೆಂದೇ ಇಂತಹ ಆರೋಪ ಸೃಷ್ಟಿಸಿದ್ದಾರೆ. ಮಹಿಳೆ ಮಾಧ್ಯಮಗಳ ಮೂಲಕ ಬಹಿರಂಗವಾಗಿ ನನ್ನ ಬಳಿ ಕ್ಷಮೆ ಕೇಳಬೇಕು' ಎಂದು ಆಗ್ರಹಿಸಿದ್ದಾರೆ. 'ಮಹಿಳೆಯು ನನ್ನ ಮೇಲಿನ ಆರೋಪ ಸಾಬೀತು ಪಡಿಸಿದರೆ ಕೂಡಲೇ ರೈತಸಂಘಕ್ಕೆ ರಾಜೀನಾಮೆ ನೀಡುವೆ' ಎಂದೂ ಚನ್ನಬಸಪ್ಪ ಹೇಳಿದ್ದಾರೆ. ಇದನ್ನೂ ಓದಿರಿ ನಾಯಿ ಬೊಗಳಿತೆಂದು ತಡರಾತ್ರಿ ಆಚೆ ಬಂದರು, ಕಣ್ಣೆದುರಲ್ಲೇ ನಡೆಯಿತು ಘೋರ ಕೃತ್ಯ

ಚನ್ನಗಿರಿ ತಾಲೂಕಿನ ಬೀರಗೊಂಡನಹಳ್ಳಿಯ ನಿಂಗರಾಜ್‌ ಎಂಬಾತ ಮೊದಲ ಪತ್ನಿ ನೀಲಮ್ಮಳನ್ನು ಬಿಟ್ಟು ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದು, ಈ ಬಗ್ಗೆ ಹಲವು ದಿನಗಳ ಹಿಂದೆಯೇ ನೀಲಮ್ಮ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಆದರೆ ಅವರ ಸಮಸ್ಯೆ ಇದುವರೆಗೂ ಬಗೆಹರಿದಿಲ್ಲ. ಹಾಗಾಗಿ ಜೂ.27ರಂದು ಮಾಧ್ಯಮಗಳ ಎದುರು ಬಂದ ನೀಲಮ್ಮ, ತನ್ನ ಗಂಡ ಇನ್ನೊಬ್ಬಳ ಜತೆ ಬೆಡ್‌ ರೂಂನಲ್ಲಿ ಕಳೆದ ಖಾಸಗಿ ಕ್ಷಣಗಳ ಫೋಟೋಗಳನ್ನೂ ಪ್ರದರ್ಶಿಸಿ ನ್ಯಾಯಕ್ಕಾಗಿ ಅಂಗಲಾಚಿದ್ದರು. ನಿಂಗರಾಜ್‌ ರೈತ ಸಂಘದಲ್ಲಿ ಗುರುತಿಸಿಕೊಂಡಿದ್ದಾನೆ. ಹಾಗಾಗಿ ರಾಜಿ ಪಂಚಾಯಿತಿ ಮಾಡಿಸಿಕೊಳ್ಳೋಣವೆಂದು ಸಂಘದ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅವರನ್ನು ಫೋನ್​ ಮೂಲಕ ಸಂಪರ್ಕಿಸಿದೆ. ಆಗ ಚನ್ನಬಸಪ್ಪ, ತನ್ನೊಂದಿಗೆ ಪಲ್ಲಂಗಕ್ಕೆ ಬಂದ್ರೆ ಸಮಸ್ಯೆ ಪರಿಹರಿಸುವುದಾಗಿ ಬೇಡಿಕೆ ಇಟ್ಟಿದ್ದ ಎಂದು ಮಹಿಳೆ ಆರೋಪಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚನ್ನಬಸಪ್ಪ, 'ನಾನು ಆ ಮಹಿಳೆಯನ್ನು ...ಆ ರೀತಿ ಕರೆದಿದ್ದರೆ ಅದು ನನ್ನ ಹೆತ್ತ ತಾಯಿಯನ್ನು ಕರೆದಂತೆ' ಎಂದಿದ್ದಾರೆ. 'ಕೆಲದಿನಗಳ ಹಿಂದೆ ಕಾರ್ಯಕರ್ತರಿಬ್ಬರನ್ನು ರೈತಸಂಘದಿಂದ ತೆಗೆದು ಹಾಕಿದ್ದೆ. ಆ ಸೇಡಿನಿಂದಾಗಿಯೇ ನನ್ನ ಮೇಲೆ ಆರೋಪ ಮಾಡಿಸಿರುವ ಅನುಮಾನವಿದೆ. ಆ ಮಹಿಳೆಯ ಆರೋಪಕ್ಕೆ ಸಾಥ್​ ನೀಡಿದ ಲಲಿತಾಬಾಯಿ ರೈತಸಂಘದ ಸದಸ್ಯೆಯೇ ಅಲ್ಲ' ಎಂದರು. 'ಆ ಮಹಿಳೆ ನನ್ನ ಮೇಲೆ ಮಾಡಿರುವ ಅರೋಪ ಹಿಂಪಡೆದರೆ, ನಾನೂ ಕೂಡ ಅವರ ಪರವಾಗಿ ಹೋರಾಟ ಮಾಡಲು ಸಿದ್ಧನಿದ್ದೇನೆ' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net