ಬೆಳೆ ಬರುವ ಮೊದಲೇ ಖೇಣಿ ಹಿಡಿಯಬೇಡಿ

chn may 10 kenidarara sabhe. (2)
Published on

ಚನ್ನಗಿರಿ: ಅಡಕೆ ಬೆಳೆ ಬರುವ ಮೊದಲೇ ಖೇಣಿದಾರರು ಅಡಕೆ ತೋಟದ ಮಾಲೀಕರ ಬಳಿ ಹೋಗಿ ಹೆಚ್ಚು ಬೆಲೆಗೆ ಖೇಣಿ ಹಿಡಿಯುವುದರಿಂದ ನಷ್ಟ ಅನುಭವಿಸಬೇಕಾಗುತ್ತದೆ ಎಂದು ದಾವಣಗೆರೆ ಜಿಲ್ಲಾ ಖೇಣಿದಾರರ ಸಂಘದ ತಾಲೂಕು ಅಧ್ಯಕ್ಷ ತಿಪ್ಪಗೊಂಡನಹಳ್ಳಿ ವೀರಭದ್ರಪ್ಪ ತಿಳಿಸಿದರು.

ಇಲ್ಲಿನ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಮಂಗಳವಾರ ಚನ್ನಗಿರಿ ತಾಲೂಕು ದಾವಣಗೆರೆ ಜಿಲ್ಲೆ ಖೇಣಿದಾರರ ಅಭಿವೃದ್ಧಿ ಸಂಘದ ಕುಂದುಕೊರತೆ ಸಭೆ ಉದ್ಘಾಟಿಸಿ ಮಾತನಾಡಿದರು.

ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯಲ್ಲಿ ಸಂಘ ಸಂಘಟನೆಯಾಗಿ ನೋಂದಣಿ ಮಾಡಿಸಲಾಗಿದೆ. ಸಂಘಟಕರು ಸಂಘಟಿತರಾದರೆ ಮಾತ್ರ ಉತ್ತಮ ಕೆಲಸ ಮಾಡಲು ಸಾಧ್ಯ. ಅವಸರ ಪಟ್ಟು ಮುಂದೆ ಹೋದರೆ ಕಷ್ಟ ಅನುಭವಿಸಬೇಕಾಗುತ್ತದೆ. ಆಗಸ್ಟ್ ಮಾಸದಲ್ಲಿ ಅಡಕೆ ಬೆಳೆ ಬರುತ್ತದೆ, ಅಲ್ಲಿಯವರೆಗೆ ಸಂಘ ತೀರ್ಮಾನ ತೆಗೆದುಕೊಂಡು ದಿನಾಂಕವನ್ನು ನಿಗದಿ ಮಾಡುವವವರೆಗೆ ಯಾರೂ ಖೇಣಿಯನ್ನು ಹಿಡಿಯಬಾರದು. ವಾತಾವರಣ ಅಡಕೆ ಬೆಳೆ ಬರುವುದನ್ನು ನಿಗದಿ ಮಾಡುತ್ತದೆ. ಅವಸರ ಪಟ್ಟು ತೋಟವನ್ನು ಹಿಡಿದರೆ ಮಾಲೀಕರಿಗೆ ಸಾಲ ಮಾಡಿ ಹಣ ನೀಡುವ ಪರಿಸ್ಥಿತಿ ಎದುರಾಗಬಹುದು ಎಂದರು.

ಮಾರುಕಟ್ಟೆಯನ್ನು ತಿಳಿದುಕೊಂಡು ಖೇಣಿ ಮಾಡಿದಾಗ ಮಾತ್ರ ಖೇಣಿದಾರ ಉಳಿಯಲು ಸಾಧ್ಯ. ಅಡಕೆ ಬೆಲೆ ಬೆಳೆಗಾರರನ್ನು ಹಾಗೂ ಖೇಣಿದಾರರನ್ನು ಉತ್ತಮ ಸ್ಥಿತಿಗೆ ಕರೆದುಕೊಂಡು ಹೋಗುತ್ತಿದೆ. ಅದರಿಂದ ಅಪಾಯಗಳು ಬರುವುದು ಸಹಜ. ಖೇಣಿದಾರರು ಎಚ್ಚರಿಕೆಯಿಂದ ಇರಬೇಕಾಗಿದೆ, ಜತೆಗೆ ತೋಟದ ಮಾಲೀಕರು ಮತ್ತು ಖೇಣಿದಾರರ ಸಂಬಂಧ ಉತ್ತಮವಾಗಿ ಇರಬೇಕು ಎಂದು ತಿಳಿಸಿದರು.

ಚಿತ್ರದುರ್ಗ ಪ್ರಕಾಶ್ ಮಾತನಾಡಿ, ಎಷ್ಟು ಎಕರೆ ಖೇಣಿ ಮಾಡುತ್ತೇವೆ ಎಂಬುದು ಮುಖ್ಯವಲ್ಲ, ಮಾಡಿದ ನಂತರ ನಿಭಾಯಿಸುವ ಶಕ್ತಿ ಇದೆಯೇ ಎಂದು ತಿಳಿದುಕೊಳ್ಳಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ಅಡಕೆಗೆ ಉತ್ತಮ ಧಾರಣೆ ಸಿಗುತ್ತಿರುವುದು ಖೇಣಿದಾರರಿಂದ, ಖೇಣಿದಾರರು ಶುದ್ಧ ಅಡಕೆಯಲ್ಲಿ ಸೆಕೆಂಡ್ ಅಡಕೆಯನ್ನು ಮಿಕ್ಸ್ ಮಾಡಲು ಹೋಗಬೇಡಿ. ಇದರಿಂದ ಮಾರುಕಟ್ಟೆಯಲ್ಲಿ ನಿರೀಕ್ಷೆಗಿಂತ ಅಧಿಕ ಬೆಲೆ ಸಿಗಲಿದೆ ಎಂದರು.

ಸುಣಿಗೆರೆ ಬಸವರಾಜಪ್ಪ, ನಟರಾಜ್ ಕುರ್ಕಿ, ದಾವಣಗೆರೆ ಶಿವಕುಮಾರ್, ಮಂಜುನಾಥ್ ಬಿಲ್ಲಹಳ್ಳಿ, ಸಿದ್ದೇಶ್ ಚಿತ್ರದುರ್ಗ, ಹರಿಹರ ಶಿರಾಜ್, ಮಾಲತೇಶ್ ದಾವಣಗೆರೆ, ಮದನ್ ಸಾಗರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net