ನೀರು ಕೊಡುವ ಆದೇಶ ಪಾಲನೆಗೆ ಆಕ್ರೋಶ: ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಖಂಡನೆ

District Farmer Welfare Committee protest Mandya
Published on

ಮಂಡ್ಯ: ತಮಿಳುನಾಡಿಗೆ ನೀರು ಹರಿಸುವ ಆದೇಶ ಪಾಲಿಸುತ್ತಿರುವ ರಾಜ್ಯಸರ್ಕಾರ ನಿಲುವನ್ನು ಖಂಡಿಸಿ ನಗರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸರ್‌ಎಂವಿ ಪ್ರತಿಮೆ ಎದುರು ಧರಣಿ ನಡೆಸಿದ ರೈತ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ರಾಜ್ಯಸರ್ಕಾರದ ವಿರುದ್ಧ ೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿದ, ತ.ನಾಡಿಗೆ ಪ್ರತಿನಿತ್ಯ ಎಂಟು ಸಾವಿರ ಕ್ಯೂಸೆಕ್ ನೀರು ಬಿಡಲು ಸರ್ವ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಿರುವುದು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಸೂಚನೆ ಒಪ್ಪಿಕೊಂಡಂತಾಗಿದೆ. ಆದೇಶ ಪಾಲನೆ ಮಾಡಿದ ನಂತರ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವುದು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದ ನಿಲುವಿನಲ್ಲಿ ವೈರುಧ್ಯತೆ ಇದೆ. ಮಾತ್ರವಲ್ಲದೆ ರೈತ ವಿರೋಧಿ ನೀತಿಯನ್ನು ತೋರಿಸುತ್ತಿದೆ. ತ.ನಾಡಿಗೆ ನಿರಂತರ ನೀರು ಹರಿಸಿದರೆ ಕೃಷ್ಣರಾಜಸಾಗರದಲ್ಲಿ ನೀರಿನ ಪ್ರಮಾಣ ಕುಸಿತ ಕಾಣಲಿದೆ. ಕುಡಿಯುವ ನೀರು ಮತ್ತು ಬೆಳೆಗಳಿಗೆ ನೀರು ಕೊಡಲು ಹೇಗೆ ಸಾಧ್ಯ?. ಮುಂದಿನ ಮೂರು ವರ್ಷ ಸಮೃದ್ಧವಾಗಿ ಬೆಳೆ ಬೆಳೆದರೆ ಸಂಕಷ್ಟದಿಂದ ಹೊರಬರಲು ಸಾಧ್ಯ. ಆದರೆ ನೀರು ಬಿಡುವ ಸರ್ಕಾರದ ತೀರ್ಮಾನ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ರಾಜ್ಯದ ಮೂರು ರಾಜಕೀಯ ಪಕ್ಷಗಳು ಕಾವೇರಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅವರ ಇಚ್ಛಾಶಕ್ತಿ ಕೊರತೆಯಿಂದ ರೈತರಿಗೆ ನಿರಂತರ ಅನ್ಯಾಯವಾಗುತ್ತಿದೆ. ನೀರು ಬಿಡುವ ನಿರ್ಣಯವನ್ನು ಒಪ್ಪುವುದಿಲ್ಲ. ಸದನದಲ್ಲಿ ಚರ್ಚೆ ಮಾಡಬೇಕಾಗಿರುವುದು ಕಾವೇರಿಕೊಳ್ಳ ಭಾಗದ ಜನಪ್ರತಿನಿಧಿಗಳ ಜವಾಬ್ದಾರಿ. ಕಾವೇರಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಈ ಬಗ್ಗೆ ಸಮಗ್ರ ಚರ್ಚೆ ನಡೆಸಿ ರೈತರ ಕಾಪಾಡಲು ಮುಂದಾಗಬೇಕು. ಕಾವೇರಿ ನೀರಿಗಾಗಿ ಹೋರಾಟ ಮಾಡಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿ. 8 ಜಿಲ್ಲೆಗಳ ಜನತೆ ಬೀದಿಗಿಳಿದು ಹೋರಾಟ ಮಾಡಬೇಕು. ಇಲ್ಲದಿದ್ದರೆ ಮುಂದಿನ ಸಂಕಷ್ಟ ಕಾಲಕ್ಕೆ ಅವರೇ ಹೊಣೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಶಿವಳ್ಳಿ ಚಂದ್ರಶೇಖರ್, ಎಚ್.ಡಿ.ದೇವೇಗೌಡ ಹುಲಿಗೆರೆಪುರ, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್, ಬಸವರಾಜ್, ಸುಶೀಲಮ್ಮ, ವೀಣಾಂಬ, ಇಂದಿರಾ, ಮಂಜುಳಾ, ವನಜಾಕ್ಷಿ, ಬಿ.ಪುಟ್ಟಸ್ವಾಮಿ, ನಾಗೇಶ್, ಪ್ರಸಾದ್, ನಾರಾಯಣಸ್ವಾಮಿ, ಕೆಂಪೇಗೌಡ, ಕನ್ನಡಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಮಹಾಂತಪ್ಪ, ಬಸವೇಗೌಡ, ಎಂ.ಎಲ್.ತುಳಸೀಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net