ಪ್ರಾಣ ಹಾನಿಯಾಗದಂತೆ ಎಚ್ಚರವಹಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

1 (4)
Published on

ಮಂಡ್ಯ: ಅತಿವೃಷ್ಠಿ ಹಾಗೂ ಭಾರೀ ಮಳೆಯಿಂದ ಕಳೆದ ನಾಲ್ಕೈದು ವರ್ಷದಲ್ಲಿ ಉಂಟಾಗಿರುವ ಪ್ರಾಣ ಹಾನಿ ಹಾಗೂ ತೊಂದರೆಗಳನ್ನು ಪಟ್ಟಿ ಮಾಡಿಕೊಳ್ಳುವುದರ ಜತೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸನ್ನದ್ಧರಾಗುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿಯೂ ವಿಪತ್ತು ನಿರ್ವಹಣಾ ಸಮಿತಿ ಸಭೆ ನಡೆಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ಪ್ರಮುಖವಾಗಿ ನದಿ ಸಮೀಪವಿರುವ ಗ್ರಾಮಗಳ ಬಗ್ಗೆ ವಿಶೇಷ ಗಮನ ನೀಡಬೇಕು. ಪ್ರಮುಖವಾಗಿ ಯಾವುದೇ ಪ್ರಾಣ ಹಾನಿಯಾಗದಂತೆ ಮೊದಲು ಎಚ್ಚರಿಕೆ ವಹಿಸಿ ಎಂದರು.

ಜಿಲ್ಲಾ ಕೇಂದ್ರದಲ್ಲಿ ಟೋಲ್ ಫ್ರೀ ಸಂಖ್ಯೆಯ ಕಂಟ್ರೋಲ್ ರೂಂ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು 1077 ಸಂಖ್ಯೆಗೆ ಕರೆ ಮಾಡಬಹುದು. ಅಂತೆಯೇ ಪ್ರತಿ ತಾಲೂಕು ಮಟ್ಟದಲ್ಲಿಯೂ ಪ್ರತ್ಯೇಕವಾಗಿ ಕಂಟ್ರೋಲ್ ರೂಂ ಪ್ರಾರಂಭವಾಗಬೇಕು. ರಸ್ತೆ ಬದಿಯಲ್ಲಿರುವ ಒಣಗಿದ ಮರದ ಕೊಂಬೆಗಳನ್ನು ಅರಣ್ಯ ಇಲಾಖೆ ಅವರು ಪರಿಶೀಲಿಸಿ ತೆರವುಗೊಳಿಸಬೇಕು. ಅಗ್ನಿಶಾಮಕ ಇಲಾಖೆ ಅವರು ತಮ್ಮ ರಕ್ಷಣಾ ಪರಿಕರಗಳ ಕಾರ್ಯನಿರ್ವಹಣೆ ಪರಿಶೀಲಿಸಿಕೊಳ್ಳಿ. ಸ್ಥಳೀಯ ಈಜುಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ. ರಕ್ಷಣಾ ಕೆಲಸಗಳಿಗೆ ಹೆಚ್ಚಿನ ಪರಿಕರಗಳು ಬೇಕಿದ್ದಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳು ಮಳೆ ನೀರು ಹರಿಯುವಿಕೆಗೆ ತೊಂದರೆಯಾಗುವ ಸ್ಥಳಗಳನ್ನು ಗುರುತಿಸಿ ಸರಿಪಡಿಸಬೇಕು. ಅಧಿಕಾರಿಗಳು ಹವಾಮಾನ ಇಲಾಖೆ ನೀಡುವ ಸೂಚನೆಗಳನ್ನು ತಪ್ಪದೇ ಗಮನಿಸುತ್ತಿರಬೇಕು. ಅಂತೆಯೇ ಸಾರ್ವಜನಿಕರಿಗೂ ಅಗತ್ಯ ಮಾಹಿತಿ ನೀಡುತ್ತಿರಬೇಕು. ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಮಳೆಯಿಂದ ಉಂಟಾಗುವ ವಿಪತ್ತುಗಳನ್ನು ತಡೆಗಟ್ಟಬೇಕು. ಜತೆಗೆ ಮಳೆಹಾನಿ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಗೆ 24 ಗಂಟೆಯೊಳಗಾಗಿ ವರದಿ ನೀಡಬೇಕು. ವಿಪತ್ತು ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ. ಆದ್ದರಿಂದ ಎಲ್ಲ ತಾಲೂಕುಗಳಿಗೆ ಮಳೆ ಹಾನಿ ಪರಿಹಾರ ಪಾವತಿಸಲು 50 ಲಕ್ಷ ರೂ ಬಿಡುಗಡೆ ಮಾಡಲಾಗುವುದು. ಮನೆ ಹಾನಿಗೆ ನೀಡಲಾಗುವ ಪರಿಹಾರದ ಸಂಬಂಧ ಪರಿಷ್ಕೃತ ಆದೇಶ ನೀಡಲಾಗಿದ್ದು, ಅದರಂತೆ ಪರಿಹಾರ ಹಣ ಪಾವತಿಸಿ ಎಂದು ಸೂಚನೆ ನೀಡಿದರು.

ಕಳೆದ ಸಾಲಿನಲ್ಲಿ ವಿಪತ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಕೆಲ ಕಾಮಗಾರಿಗಳು ಈವರೆಗೂ ಪ್ರಾರಂಭವಾಗಿರುವುದಿಲ್ಲ. ಅಂತಹ ಕಾಮಗಾರಿಗಳ ಹಣವನ್ನು ಹಿಂಪಡೆದು ನೋಟಿಸ್ ಜಾರಿ ಮಾಡಬೇಕು. ಜಿಲ್ಲೆಯಲ್ಲಿ ಹಾಲಿ ಉಂಟಾಗುತ್ತಿರುವ ಮಳೆಯ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶೇಷವಾಗಿ ಹೆಚ್ಚಿನ ಗಮನ ಹರಿಸಬೇಕು. ಶಾಲೆಗಳು ತಗ್ಗು ಪ್ರದೇಶದಲ್ಲಿದ್ದು, ಮಕ್ಕಳಿಗೆ ಶಾಲೆಗೆ ಬರಲು ನೀರು ತುಂಬಿದ ಪ್ರದೇಶ ದಾಟಿ ಬರಬೇಕು ಎಂದಿದ್ದರೆ ಅವುಗಳನ್ನು ತಕ್ಷಣವೇ ಗಮನಕ್ಕೆ ತರಬೇಕು. ಮಾತ್ರವಲ್ಲದೆ ಮಳೆ ಹಾನಿಗೊಳಗಾದ ಶಾಲೆ, ಅಂಗನವಾಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿ ಕೈಗೊಳ್ಳಲು ಅನುದಾನ ಬಿಡುಗಡೆ ಮಾಡಿದಾಗ ಸಂಬಂಧಿಸಿದ ಇಂಜಿನಿಯರಿಂಗ್ ವಿಭಾಗದೊಂದಿಗೆ ಸಮನ್ವಯ ಸಾಧಿಸುವುದರ ಜತೆಗೆ ಕಾಮಗಾರಿ ಮಾಡಿಸಿಕೊಳ್ಳಿ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ನಾಗಮಂಗಲ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುವುದರ ಜತೆಗೆ ಸಮಸ್ಯೆ ಪರಿಹಾರ ಮಾಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಶಿವಚಂದ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಸುರೇಶ್, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಅಶೋಕ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net