

ಮಂಡ್ಯ: ಕುಡಿಯುವ ನೀರಿನ ಕೃತಕ ಅಭಾವ ಸೃಷ್ಟಿಸುವ ಸಾಧ್ಯತೆ ಇರುವುದರಿಂದ ಟ್ಯಾಂಕರ್ ಬಳಕೆ ಬಗ್ಗೆ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಇಒ ದೃಢೀಕರಣ ಕಡ್ಡಾಯವೆಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡುವ ಹೆಸರಿನಲ್ಲಿ ಹಣ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಅಂತೆಯೇ ಸಮಸ್ಯೆಗಳಿರುವ ಗ್ರಾಮಗಳಿಗೆ ಯಾವುದೇ ಮೂಲಗಳಿಂದ ನೀರು ಪೂರೈಕೆ ಮಾಡಲು ಸಾಧ್ಯವೇ ಇಲ್ಲವೆನ್ನುವ ದೃಢೀಕರಣವನ್ನು ಅಧಿಕಾರಿಗಳು ಕಡ್ಡಾಯವಾಗಿ ಮಾಡಬೇಕು ಎಂದು ತಿಳಿಸಿದರು.
ಪ್ರಮುಖವಾಗಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿರುವ ಹಿನ್ನಲೆಯಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಎಸ್‌ಡಿಆರ್‌ಎಫ್ ಖಾತೆಯಲ್ಲಿ ಅನುದಾನದ ಕೊರತೆ ಇಲ್ಲ. ಆದ್ದರಿಂದ ಈ ಅನುದಾನದಲ್ಲಿ ಖಾಸಗಿ ಬೋರ್‌ವೆಲ್ನಿಂದ ನೀರು ಪಡೆಯಲು ಹಾಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲು ಮಾತ್ರ ಸಾಧ್ಯ. ಇದಕ್ಕೆ ಪೂರಕವಾಗಿ ಸಿದ್ಧತೆ ಮಾಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ ಎಂದು ನಿರ್ದೇಶನ ನೀಡಿದರು.
ಟ್ಯಾಂಕರ್ ಮೂಲಕ ನೀರು ಪಡೆಯಲು ರಾಜ್ಯಸರ್ಕಾರ ನೀಡಿರುವ ಸೂಚನೆಯಂತೆ ಹೋಬಳಿ ಅಥವಾ ತಾಲೂಕು ಮಟ್ಟದಲ್ಲಿ ಟೆಂಡರ್ ಆಹ್ವಾನಿಸಬೇಕು. ಅಂತೆಯೇ ತಾಲೂಕು ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ಅನುಮೋದನೆ ಪಡೆದು ದರ ನಿಗದಿ ಮಾಡಿಕೊಳ್ಳಬೇಕು. ಇದರಿಂದ ಕುಡಿಯುವ ನೀರು ತೊಂದರೆಯಾದಲ್ಲಿ ತಕ್ಷಣ ಕ್ರಮ ವಹಿಸಬಹುದು. ಜಿಲ್ಲೆಯ ಏಳು ತಾಲೂಕನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿದಿನವೂ ಕುಡಿಯುವ ನೀರು, ಕೃಷಿ, ಮೇವಿಗೆ ಸಂಬಂಧಿಸಿದಂತೆ ಚಿತ್ರಣಗಳು ಬದಲಾಗುತ್ತಿರುತ್ತದೆ. ಆದ್ದರಿಂದ ಪ್ರತಿವಾರ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಹಾಗೂ ಪಿಡಿಒ ಗಳ ಜತೆ ಸಭೆ ಆಯೋಜಿಸಿ ಚರ್ಚೆ ನಡೆಸಬೇಕು. ಈ ಮೂಲಕ ನಿಖರ ಮಾಹಿತಿ ಇಟ್ಟುಕೊಂಡು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಏಳು ಗ್ರಾಮದಲ್ಲಿ ಸಮಸ್ಯೆ: ಪ್ರಸ್ತುತ ಕೆ.ಆರ್.ಪೇಟೆ ತಾಲೂಕಿನ 3 ಗ್ರಾಮ, ನಾಗಮಂಗಲ ತಾಲೂಕಿನ 3 ಮತ್ತು ಮಳವಳ್ಳಿ ತಾಲೂಕಿನ ಒಂದು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಆ ಗ್ರಾಮಗಳಿಗೆ ನೀರನ್ನು ಒದಗಿಸಲಾಗುತ್ತಿದೆ ಎಂದು ಡಿಸಿ ಡಾ.ಕುಮಾರ ವಿವರಿಸಿದರು.
ಈ ಮೊದಲು ಗ್ರಾಮಲೆಕ್ಕಿಗರು ತಮ್ಮ ವ್ಯಾಪ್ತಿಯಲ್ಲಿ ಬರದಿಂದ ಉಂಟಾದ ಬೆಳೆ ನಷ್ಟದ ವಿವರವನ್ನು ಕ್ರೋಡೀಕರಿಸಿ ಆ್ಯಪ್ ಮೂಲಕ ಕಳುಸುತ್ತಿದ್ದರು. ಅದರಂತೆ ರೈತರಿಗೆ ಬರ ಪರಿಹಾರ ಹಣ ಪಾವತಿಯಾಗುತ್ತಿತ್ತು. ಆದರೆ ಈ ಬಾರಿ ಫ್ರೂಟ್ಸ್ ಐ.ಡಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಮಾತ್ರವಲ್ಲದೆ ಸಂಪೂರ್ಣ ವಿವರವನ್ನು ಅಪ್‌ಲೋಡ್ ಮಾಡಿದರೆ ಮತ್ರ ಬರ ಪರಿಹಾರ ಹಣ ಪಾವತಿಸಲು ಸಾಧ್ಯ. ಇದನ್ನು ರೈತರಿಗೆ ಮನವರಿಕೆ ಮಾಡಿ ಫ್ರೂಟ್ಸ್ ಐ.ಡಿ ಯಲ್ಲಿ ಹೆಸರು ನೋಂದಾಯಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನು ಜಿಲ್ಲೆಯಲ್ಲಿ ಜಾನುವಾರುಗಳಿಗೆ ಪ್ರಸ್ತುತ ಮೇವಿನ ಸಮಸ್ಯೆ ಇಲ್ಲ. ಆದರೂ ವಿ.ಸಿ ಫಾರ್ಮ್, ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿರುವ ಜಮೀನನ್ನು ಗುರುತಿಸಿ ಮೇವು ಬೆಳೆ ಬೆಳೆಯಲು ಯೋಜನೆ ಸಿದ್ಧಪಡಿಸಿ. ಅಂತೆಯೇ ತಾಲೂಕುವಾರು ಟಾಸ್ಕ್‌ಫೋರ್ಸ್ ಸಮಿತಿಯನ್ನು ಈಗಾಗಲೇ ರಚಿಸಿದ್ದು, ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಬೇಕು. ಮಾತ್ರವಲ್ಲದೆ ಸಮಿತಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಎಸ್‌ಡಿಆರ್‌ಎಫ್ ಅನುದಾನದಲ್ಲಿ ಬೋರ್‌ವೆಲ್ ಕೊರೆಯಲು ಹಾಗೂ ಪೈಪ್‌ಲೈನ್ ವಿಸ್ತರಣೆ ಸೇರಿದಂತೆ ಮುಂತಾದ ಕೆಲಸಗಳಿಗೆ ಹಣ ಪಾವತಿಸಲು ಅವಕಾಶವಿರುವುದಿಲ್ಲ. ಈ ಹಿನ್ನಲೆಯಲ್ಲಿ ಸದರಿ ಕೆಲಸಗಳಿಗೆ 15ನೇ ಹಣಕಾಸು ಯೋಜನೆಯಡಿ ಹಣ ಮೀಸಲಿಡುವುದು ಉತ್ತಮ ಎಂದು ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಟ್ಯಾಂಕರ್ ಹಾಗೂ ಕೃತಕ ಬೋರ್‌ವೆಲ್ ಮೂಲಕ ನೀರು ಒದಗಿಸಿದ ಸಂದರ್ಭದಲ್ಲಿ 15 ದಿನದೊಳಗಾಗಿ ಬಿಲ್ ಸಲ್ಲಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.