ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ: ಜಿಲ್ಲಾಧಿಕಾರಿ

dc vidyakumari k
Published on

ಉಡುಪಿ: ಜಿಲ್ಲಾದ್ಯಂತ ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ, ಯಾವುದೇ ರೀತಿಯಲ್ಲೂ ಜನರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಂದಿದೆ. ಅಂತರ್ಜಲ ಮಟ್ಟವೂ ಶೇ. 24 ಕುಸಿದಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು. ಅಧಿಕಾರಿಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕು ಎಂದು ಆದೇಶಿಸಿದರು.

ಈಗಿನಿಂದಲೇ ಸ್ಥಳಿಯವಾಗಿ ನೀರಿನ ಲಭ್ಯತೆ, ಖಾಸಗಿ ಬೋರ್​ವೆಲ್​ಗಳಿಂದ ನೀರು ಪಡೆದು, ವಿತರಿಸುವ ಬಗ್ಗೆ ನೀಲಿನಕ್ಷೆ ತಯಾರಿಸಬೇಕು. ತೀರ ಅಗತ್ಯವಿದ್ದಲ್ಲಿ ಮಾತ್ರ ಟ್ಯಾಂಕರ್​ ಮೂಲಕ ಸಾರ್ವಜನಿಕರಿಗೆ ನೀರು ನೀಡಬೇಕು. ಈಗಲೇ ಏಜೆನ್ಸಿಗಳನ್ನು ಷರತ್ತಿನನ್ವಯ ಗುರುತಿಸಿ, ತಯಾರಿ ನಡೆಸಬೇಕು. ಸಾರ್ವಜನಿಕರಿಗೆ ನೀರಿನ ಮಿತ ಬಳಕೆಯ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಅಧಿಕಾರಿಗಳ ನಿಷ್ಕಾಳಜಿಗೆ ಅಸಮಾಧಾನ
ಜಿಲ್ಲೆಯ ಪ್ರತಿಯೊಂದು ಕಿಂಡಿ ಅಣೆಕಟ್ಟುಗಳಿಗೆ ತಡೆ ಹಲಗೆ ಅಳವಡಿಸಬೇಕು. ಜಿಲ್ಲೆಯಲ್ಲಿ ಒಟ್ಟು 603 ಕಿಂಡಿ ಅಣೆಕಟ್ಟುಗಳಲ್ಲಿ 210ಕ್ಕೆ ಮಾತ್ರ ಹಲಗೆ ಅಳವಡಿಸಿದ್ದೀರಿ. ಈಗಾಗಲೇ ಹಿಂದಿನ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಹಲಗೆ ಅಳವಡಿಸಲು ಸೂಚನೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಕಿಂಡಿಗಳಿಗೆ ಹಲಗೆ ಹಾಕಲು ಸೂಚನೆ ನೀಡಿದರು.

ಜಿಪಂ ಸಿಇಒ ಪ್ರಸನ್ನ ಎಚ್​, ಕುಂದಾಪುರ ಸಹಾಯಕ ಕಮಿಷನರ್​ ರಶ್ಮಿ ಎಸ್​,, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್​., ಪೌರಾಯುಕ್ತ ರಾಯಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net