

ಕಾಸರಗೋಡು: ಜಿಲ್ಲೆಯ ಕಾರಡ್ಕ, ಮುಳಿಯಾರ್, ಬೇಡಡ್ಕ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿರತೆ ಭೀತಿ ದೂರಾಗಿಸುವಂತೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳು ಸೂಚಿಸಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ವಿಷಯ ಪ್ರಸ್ತಾಪವಾಯಿತು.
ಚಿರತೆ ಭೀತಿಯಿಂದ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಚಿರತೆಯನ್ನು ಸೆರೆ ಹಿಡಿದು ದೂರದ ಕಾಡಿಗೆ ಸ್ಥಳಾಂತರಿಸಬೇಕು. ಈ ಬಗ್ಗೆ ಅರಣ್ಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸಾರ್ವಜನಿಕರ ಭಯ ಹೋಗಲಾಡಿಸಬೇಕು. ಚಿರತೆ ಸಂಚಾರದ ಸಮಸ್ಯೆ ಇರುವ ಪ್ರದೇಶದ ನಾಲ್ಕು ಶಾಲಾ ವ್ಯಾಪ್ತಿಯಲ್ಲಿ ಬೆಳಗ್ಗೆ ಮತ್ತು ಸಂಜೆ ಅರಣ್ಯ ಇಲಾಖೆಯ ವಿಶೇಷ ಗಸ್ತು ನಡೆಸಬೇಕು. ಬೇಡಡ್ಕ, ಬೋವಿಕ್ಕಾನ ವ್ಯಾಪ್ತಿಯಲ್ಲಿ ಚಿರತೆ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಕ್ಯಾಮರಾ ಅಳವಡಿಸಬೇಕೆಂದು ಆಗ್ರಹ ಕೇಳಿಬಂತು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮಾತನಾಡಿ, ಕುಂಬಳೆ ಪಂಚಾಯಿತಿ ವ್ಯಾಪ್ತಿಯ ಕೋಡಿಯಮ್ಮ, ಆರಿಕ್ಕಾಡಿ, ಬಂಬ್ರಾಣ ಭಾಗದಲ್ಲಿ ಕಾಡುಹಂದಿ ಉಪಟಳ ಹೆಚ್ಚಾಗಿದ್ದು, ಕಾಡುಹಂದಿಗಳ ಸಂಚಾರದಿಂದ ಅಪಘಾತ, ಹಾನಿ ಸಂಭವಿಸುತ್ತಿದೆ. ಕುಂಬಳೆಯನ್ನು ಕಾಡುಹಂದಿಗಳ ಉಪಟಳವಿರುವ ಪಂಚಾಯಿತಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಎಡಿಎಂ ಪಿ.ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅವರನ್ನು ಸನ್ಮಾನಿಸಲಾಯಿತು. ಶಾಸಕರಾದ ಎಂ. ರಾಜಗೋಪಾಲನ್, ಇ.ಚಂದ್ರಶೇಖರನ್, ಸಿ.ಎಚ್.ಕುಞಂಬು, ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಅಪರ ಜಿಲ್ಲಾಧಿಕಾರಿ ಪ್ರತೀಕ್ ಜೈನ್, ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೇಗಂ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.