ನಾಗರಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ

13 mbr sabhe
Published on

ಮಲೇಬೆನ್ನೂರು: ರೈಸ್ ಮಿಲ್​ಗಳಿಂದ ನಾಗರಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಜಿಲ್ಲಾ ಉಪ ಪರಿಸರ ಅಧಿಕಾರಿ ತಂಜಿಲ್ಲಾ ರೈಸ್ ಮಿಲ್ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ಪುರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ರೈಸ್​ವಿುಲ್ ಮತ್ತು ಅವಲಕ್ಕಿ ಮಿಲ್​ಗಳಿಂದ ಹೊರಬರುತ್ತಿರುವ ಬೂದಿ ಮತ್ತು ಧೂಳಿನಿಂದ ಆಗುತ್ತಿರುವ ತೊಂದರೆಗಳ ಕುರಿತು ಸಾರ್ವಜನಿಕರು ನೀಡಿದ ದೂರಿನನ್ವಯ ಆಯೋಜಿಸಿದ್ದ ರೈಸ್​ವಿುಲ್ ಮಾಲೀಕರ ಹಾಗೂ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು.

ಮಿಲ್​ಗಳಿಂದ ಹೊರಬರುತ್ತಿರುವ ಬೂದಿ ಮನೆಯೊಳಗೆ ಬಿದ್ದಿರುವ ವಿಡಿಯೋವನ್ನು ನಾಗರಿಕರು ಜಿಲ್ಲಾಧಿಕಾರಿಗೆ ಹಾಗೂ ನಮ್ಮ ಇಲಾಖೆಗೆ ಕಳುಹಿಸಿದ್ದು, ಈ ಕುರಿತು ಪುರಸಭೆ ಅಧಿಕಾರಿಗಳು ಮಿಲ್​ಗಳಿಗೆ ತೆರಳಿ ಪರಿಶೀಲಿಸಿದಾಗ ಲೋಪಗಳು ಕಂಡು ಬಂದಿವೆ ಎಂದರು.

ಈ ಬಗ್ಗೆ ಮೇ 27ಕ್ಕೆ ನೀಡಿದ್ದ ನೋಟಿಸ್​ಗೆ ರೈಸ್ ಮಿಲ್ ಮಾಲೀಕರು ಇದುವರೆಗೂ ಅನುಪಾಲನಾ ವರದಿ ನೀಡಿಲ್ಲ. ಈಗ ಬಂದಿರುವ ದೂರುಗಳಿಗೆ ಮಿಲ್​ಗಳನ್ನು ಸ್ಥಳಾಂತರಿಸುವುದು ಸುಲಭದ ಮಾತಲ್ಲ. ಆದ್ದರಿಂದ ಮಾಲೀಕರು ಪ್ರತಿ ವರ್ಷ ವೈಜ್ಞಾನಿಕವಾಗಿ ಮಿಲ್​ಗಳನ್ನು ರೆಡಿ ಮಾಡಿಕೊಳ್ಳಬೇಕು. ಆಗ ಇಂತಹ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ತಿಳಿಸಿದರು.

ಪುರಸಭೆ ಮಾಜಿ ಸದಸ್ಯ ಮಾಸಣಗಿ ಶೇಖರಪ್ಪ ಹನುಮಂತಪ್ಪ ಮಾತನಾಡಿ, ರೈಸ್​ವಿುಲ್​ಗಳಿಂದ ಬರುತ್ತಿರುವ ಧೂಳಿನ ಬಗ್ಗೆ ಸಾಕಷ್ಟು ಬಾರಿ ಮಾಲೀಕರಿಗೆ ಹೇಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

14ನೇ ವಾರ್ಡ್​ನ ಮೇಸ್ತ್ರಿ ಮಹಮ್ಮದ್ ಸಾಬ್ ಮಾತನಾಡಿ, ಮಿಲ್​ನಿಂದ ಬರುವ ಧೂಳು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿಕೊಡಿ ಎಂದರು.

ಪುರಸಭೆ ಪರಿಸರ ಇಂಜಿನಿಯರ್ ಉಮೇಶ್ ಮಾತನಾಡಿ, ಈ ಹಿಂದೆಯೇ ರೈಸ್​ವಿುಲ್​ಗಳ ಸ್ಥಳ ಪರಿಶೀಲನೆ ಮಾಡಿ, ಸ್ವಚ್ಛತೆ ಕಾಪಾಡುವಂತೆ ಮತ್ತು ಧೂಳು ಹೊರಬರದಂತೆ ನೋಡಿಕೊಳ್ಳಿ ಎಂದು ತಿಳಿಸಿದ್ದೆವು. ಆಗ ಅವರು ಸರಿಪಡಿಸುವುದಾಗಿ ಹೇಳಿದ್ದರು ಎಂದು ತಿಳಿಸಿದರು.

ರೈಸ್​ವಿುಲ್ ಮಾಲೀಕರಾದ ಯಕ್ಕನಹಳ್ಳಿ ಬಸವರಾಜಪ್ಪ, ಬಿ. ಮಲ್ಲಿಕಾರ್ಜುನ್ ಮತ್ತು ಬಿ.ಬಿ. ರುದ್ರೇಶ್ ಮಾತನಾಡಿ, ವರ್ಷಕ್ಕೊಮ್ಮೆ ರೈಸ್​ವಿುಲ್​ಗಳ ಆಧುನಿಕೀಕರಣ ಮಾಡುತ್ತೇವೆ. ಬೂದಿ ಹೊರಗಡೆ ಬರದಂತೆ ತಡೆಯಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಆದರೆ, ಮಳೆಗಾಲದಲ್ಲಿ ಗಾಳಿಯ ತೀವ್ರತೆ ಹೆಚ್ಚಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇಂಜಿನಿಯರ್​ಗಳನ್ನು ಕರೆಸಿ ಸಮಸ್ಯೆಯನ್ನು ಸರಿಪಡಿಸುತ್ತೇವೆ. ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಮುಖ್ಯಶಿಕ್ಷಕ ದಂಡಿ ತಿಪ್ಪೇಸ್ವಾಮಿ, ಪುರಸಭೆ ಉಪಾಧ್ಯಕ್ಷೆ ಕೆ.ಪಿ. ವಿಜಯಲಕ್ಷ್ಮೀ ಗಂಗಾಧರ್, ಪುರಸಭೆ ಸದಸ್ಯರಾದ ಗೌಡ್ರು ಮಂಜಣ್ಣ, ಕೆ.ಜಿ.ಆರ್. ಲೋಕೇಶ್, ಭೋವಿ ಶಿವು, ಗ್ರಾಪಂ ಮಾಜಿ ಅಧ್ಯಕ್ಷ ಭೋವಿ ಕುಮಾರ್ ಮಾತನಾಡಿದರು.

ಪುರಸಭೆ ಮುಖ್ಯಾಧಿಕಾರಿ ಜಯಲಕ್ಷ್ಮೀ, ಪುರಸಭೆ ಸದಸ್ಯರಾದ ನಯಾಜ್ ಖಲೀಲ್, ಬೆಣ್ಣೆಹಳ್ಳಿ ಸತೀಶ್, ಶಬ್ಬೀರ್ ಖಾನ್, ಷಾ ಅಬ್ರಾರ್, ದಾದಾಪೀರ್, ಸಾಬಿರ್ ಅಲಿ, ಆರೀಫ್ ಅಲಿ, ಬಿ. ವೀರಯ್ಯ, ಎಕ್ಕೆಗೊಂದಿ ಕರಿಯಪ್ಪ, ಎಂ.ಬಿ. ರುಸ್ತುಮ್ ಕಣ್ಣಾಳ್ ನಾಗರಾಜ್, ಪಿ.ಬಿ. ಬೀರಪ್ಪ, ಹೊಸಳ್ಳಿ ಕರಿಬಸಪ್ಪ, ಪಿ.ಎಚ್. ಶಿವಕುಮಾರ್, ರೈತ ಸಂಘದ ಚಂದ್ರು, ರೈಸ್ ಮಿಲ್ ಮಾಲೀಕ ಬಿ. ಪಂಚಪ್ಪ, ಅವಲಕ್ಕಿ ಮಿಲ್ ರಾಜು, ಪುರಸಭೆ ಅಧಿಕಾರಿಗಳಾದ ನವೀನ್, ಶಿವರಾಜ್, ರಾಘವೇಂದ್ರ ಸೇರಿ ಇತರರು ಇದ್ದರು.

ರೈಸ್​ವಿುಲ್​ಗಳಿಂದಾಗಿಯೇ ಮಲೇಬೆನ್ನೂರು ಬೆಳೆದಿದೆ ಮತ್ತು ಹೆಸರುವಾಸಿಯಾಗಿದೆ. ಆದ್ದರಿಂದ, ಅವರ ವಿರುದ್ಧ ಅವಸರದ ನಿರ್ಧಾರ ಕೈಗೊಳ್ಳದೆ, ಸಮಯಾವಕಾಶ ನೀಡಬೇಕು. ಬೂದಿ ಸಮಸ್ಯೆಯನ್ನು ಬಗೆಹರಿಸುವ ವಿಶ್ವಾಸವಿದೆ. | ಹನುಮಂತಪ್ಪ, ಪುರಸಭೆ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net