

ಕೊಪ್ಪಳ:ಯುವಕರು ಹೆಚ್ಚು ಕ್ರೀಡೆಗಳಲ್ಲಿ ಭಾಗಿ ಆಗಬೇಕು. ಪಠ್ಯದ ಜತೆಗೆ ಇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾ ಆಡಳಿತ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವ ಜನತೆ ಕ್ರೀಡೆಯಲ್ಲಿ ತಮ್ಮ ಪ್ರತಿಭೆ ತೋರಿಸಬೇಕು. ಇದು ಮುಂದಿನ ಜೀವನಕ್ಕೆ ಅನುಕೂಲ ಆಗಲಿದೆ. ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಿ. ಸೋಲು, ಗೆಲುವು ಸಾಮಾನ್ಯ. ಭಾಗವಹಿಸುವಿಕೆ ಮುಖ್ಯ.
ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಿ ದೇಶಕ್ಕೆ ಹೆಸರು ತರಬಹುದು. ಇದಕ್ಕೆ ನಮ್ಮ ಅನೇಕ ಕ್ರೀಡಾಪಟುಗಳು ಉದಾಹರಣೆ ಆಗಿದ್ದಾರೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡೆಗಳಲ್ಲಿ ಭಾಗವಹಿಸಿ.
ವಲಯ, ತಾಲೂಕು ಮಟ್ಟದ ಕ್ರೀಡೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಯುವಕರಿಗೆ ಹೆಚ್ಚು ಅವಕಾಶ ಸಿಗುತ್ತವೆ. ಅದರ ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಮಕ್ಕಳು ಪಾಠದ ಜತೆಗೆ ಕೀಡೆಯಲ್ಲಿ ತೊಡಗಿಸಿಕೊಳ್ಳಿ. ಸ್ನೇಹ, ಪ್ರೀತಿಯಿಂದ ಪಾಲ್ಗೊಳ್ಳಿ.
ಕ್ರೀಡಾ ಶಿಸ್ತು ಕಾಪಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಮಾತನಾಡಿ,
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವೈಯಕ್ತಿಕ ಪ್ರಥಮ, ದ್ವಿತೀಯ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಾಳುಗಳು ಭಾಗವಹಿಸಿದ್ದಾರೆ.
ಅವರಿಗೆ ತಾಲೂಕು ಕೇಂದ್ರ ಸ್ಥಾನದಿಂದ ಹೋಗಿ ಬರುವ ಸಾಮಾನ್ಯ ಬಸ್ ಪ್ರಯಾಣ ಭತ್ಯೆ ನೀಡಲಾಗುವುದು. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕ್ರೀಡಾಕೂಟ ಇರಲಿವೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎ.ಬಸವರಾಜ, ತಾಲೂಕು ಕ್ರೀಡಾ ಅಧಿಕಾರಿ ಶರಣಬಸಪ್ಪ ಬಂಡಿಹಾಳ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಯ್ಯ ಪೂಜಾರ,
ಕಾರ್ಯದರ್ಶಿ ಬಸವರಾಜ ಹನುಮಸಾಗರ, ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪುಂಡಲೀಕಪ್ಪ ಇತರರಿದ್ದರು.
ಸನ್ಮಾನ: 14 ವರ್ಷದ ಒಳಗಿನ ಬಾಲಕಿಯರ ವಾಲಿಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಕೊಪ್ಪಳ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ತರಬೇತುದಾರರಾದ
ಸುರೇಶ ಮತ್ತು ಕಮಲ ಸಿಂಗ್‌ಗೆ ಸಿಇಒ ರಾಹುಲ್ ರತ್ನಂ ಪಾಂಡೆಯ ಸನ್ಮಾನಿಸಿದರು. ಕ್ರೀಡಾ ಕೂಟದಲ್ಲಿ ಗುಂಡು ಎಸೆವ ಮೂಲಕ ವೈಯಕ್ತಿಕ ಕ್ರೀಡೆಗಳಿಗೆ ಚಾಲನೆ ನೀಡಿದರು.