ಮುದ್ದೇಬಿಹಾಳದಲ್ಲಿ ಜಿಲ್ಲಾ ನ್ಯಾಯಾಲಯಕ್ಕೂ ಕ್ರಮ

District court action in Muddebihal too
ತಾಳಿಕೋಟೆ ಪಟ್ಟಣದ ಹಳೆ ಪುರಸಭೆ ಆವರಣದಲ್ಲಿ ಸಿವಿಲ್​ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯವನ್ನು ಉಚ್ಚ ನ್ಯಾಯಾಲಯ ಹಾಗೂ ವಿಜಯಪುರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಅಶೋಕ ಎಸ್​. ಕಿಣಗಿ ಉದ್ಘಾಟಿಸಿದರು. ನ್ಯಾಯಾಧೀಶರಾದ ಶಿವಾಜಿ ಅನಂತ ನಲವಡೆ, ನ್ಯಾಯವಾದಿಗಳ ಸಂದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಇತರರು ಇದ್ದಾರೆ.
Published on

ತಾಳಿಕೋಟೆ: ಮುದ್ದೇಬಿಹಾಳದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಮಂಜೂರಾತಿ ಇನ್ನೂ ದೊರೆಯಬೇಕಿದ್ದು, ಮಂಜೂರಾತಿ ದೊರೆತರೆ ಕೂಡಲೇ ಕಾರ್ಯಾರಂಭಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಚ್ಚ ನ್ಯಾಯಾಲಯ ಹಾಗೂ ವಿಜಯಪುರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಅಶೋಕ ಎಸ್​. ಕಿಣಗಿ ಹೇಳಿದರು.

ಜಿಲ್ಲಾ ನ್ಯಾಯಾಂಗ ವಿಜಯಪುರ, ಲೋಕೋಪಯೋಗಿ ಇಲಾಖೆ ಮತ್ತು ನ್ಯಾಯವಾದಿಗಳ ಸಂ ಸಂಯುಕ್ತ ಆಶ್ರಯದಲ್ಲಿ ತಾಳಿಕೋಟೆ ಪಟ್ಟಣದ ಹಳೆಯ ಪುರಸಭೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿವಿಲ್​ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯವನ್ನು ನೂತನವಾಗಿ ಸೃಜಿಸಲ್ಪಟ್ಟ ಸಿವಿಲ್​ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಪ್ರಥಮವಾಗಿ ಮುದ್ದೇಬಿಹಾಳ, ಬಸವನಬಾಗೇವಾಡಿ, ಇಂಡಿಯಿಂದ ಅರ್ಜಿಗಳು ಬಂದಿದ್ದವು. ಈಗಾಗಲೇ ಮುದ್ದೇಬಿಹಾಳದಲ್ಲಿ ಜಿಲ್ಲಾ ನ್ಯಾಯಾಲಯ ಆರಂಭಿಸುವ ನಿಟ್ಟಿನಲ್ಲಿ ಈ ಭಾಗದ ಜನಪ್ರತಿನಿಧಿಗಳ ಸಹಕಾರ ತೆಗೆದುಕೊಂಡು ಮಂಜೂರು ಮಾಡಿಸಿಕೊಂಡು ಬಂದರೆ ನ್ಯಾಯಾಲಯ ಆರಂಭಕ್ಕೆ ಅನುಕೂಲವಾಗಲಿದೆ ಎಂದರು.

ತಾಳಿಕೋಟೆ ಭಾಗಕ್ಕೆ ಸಂಬಂಧಿಸಿದಂತೆ 2019 ರಿಂದ 2500ಕ್ಕಿಂತಲೂ ಅಧಿಕ ಪ್ರಕರಣಗಳು ಇತ್ಯರ್ಥವಾಗಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ತಾಳಿಕೋಟೆಯಲ್ಲಿ ಪೂರ್ಣಪ್ರಮಾಣದ ನ್ಯಾಯಾಲಯ ಆರಂಭಿಸಲು ಆಗದಿದ್ದರೂ ಮೊದಲು ಎರಡು ದಿನವಾದರೂ ಕಲಾಪ ನಡೆಸಲು ಅನುಕೂಲ ಮಾಡಿದರೆ ಆದಷ್ಟು ಪ್ರಕರಣಗಳು ಬೇಗ ಇತ್ಯರ್ಥ ಆಗಬಹುದು ಎಂದು ನ್ಯಾಯಾಲಯ ಆರಂಭಿಸಿದ್ದೇವೆ.

ಶುಕ್ರವಾರ, ಶನಿವಾರ ಎರಡೂ ದಿನ ಕಲಾಪ ನಡೆಯಲಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಜನಪ್ರತಿನಿಧಿಗಳ ಸಹಕಾರ ಪಡೆದು ಪೂರ್ಣ ಪ್ರಮಾಣದ ನ್ಯಾಯಾಲಯದ ಕಲಾಪ ನಡೆಸಬಹುದಾಗಿದೆ ಎಂದರು.

ತಾಳಿಕೋಟೆಯಲ್ಲಿ ಸದ್ಯ ಆರಂಭಿಸಿರುವ ನ್ಯಾಯಾಲಯ ಕಟ್ಟಡ ತಾತ್ಕಾಲಿಕವಾಗಿದೆ. ಈಗಾಗಲೇ ನಾಲ್ಕು ಎಕರೆ ಜಮೀನು ನೀಡುವ ಸಂಬಂಧ ಜಿಲ್ಲಾಧಿಕಾರಿಗಳು ತಹಸೀಲ್ದಾರರಿಗೆ ಸೂಚನೆ ನೀಡಿದ್ದಾರೆ. ಆ ಜಾಗೆಯಲ್ಲಿ ನ್ಯಾಯಾಲಯ ಕಟ್ಟಡ, ನ್ಯಾಯವಾದಿಗಳ ವಸತಿ ಗೃಹ, ಬಾರ್​ ಅಸೋಸಿಯೇಷನ್​ ಕಟ್ಟಡ ನಿರ್ಮಾಣವಾಗಲಿದೆ.

ಹೈಕೋರ್ಟ್​ ಕಡೆಯಿಂದ ಏನೆಲ್ಲಾ ಅವಶ್ಯಕ ಸೌಲಭ್ಯಗಳು ಬೇಕೋ ಅವೆಲ್ಲವನ್ನೂ ಕೂಡಲೆ ಒದಗಿಸಿಕೊಡುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಾಜಿ ಅನಂತ ನಲವಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಅಶೋಕ ಎಸ್​. ಕಿಣಗಿ ಅವರ ಸಾಮಾಜಿಕ ಕಳಕಳಿಯಿಂದ ಈ ಭಾಗದಲ್ಲಿ ನ್ಯಾಯಾಲಯ ಸ್ಥಾಪನೆಗೆ ಅನುಕೂಲವಾಗಿದೆ.

ಲ್ಲಾಡಳಿತಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಂದಾಗ ಕೂಡಲೇ ಇತ್ಯರ್ಥಪಡಿಸಿ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ನ್ಯಾಯಾಲಯದ ಹೊಸ ಕಟ್ಟಡಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ 165/ಬಿ ಸವೇ ನಂ.ನದಲ್ಲಿ ನಾಲ್ಕು ಎಕರೆ ಜಮೀನು ನೀಡುವ ಸಂಬಂಧ ಜಿಲ್ಲಾಧಿಕಾರಿಗಳು, ತಹಸೀಲ್ದಾರರಿಗೆ ನಿರ್ದೇಶನ ನೀಡಿದ್ದು ಅದು ತ್ವರಿತಗತಿಯಲ್ಲಿ ಆಗಬೇಕಿದೆ ಎಂದರು.

ನ್ಯಾಯವಾದಿಗಳ ಸಂದ ಅಧ್ಯಕ್ಷ ಶಶಿಕಾಂತ ಮಾಲಗತ್ತ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭಾಗದ ಜನರ ಎರಡು ವರ್ಷಗಳ ಕನಸು ನನಸಾಗಿದೆ. ಇದರಿಂದ ಮುದ್ದೇಬಿಹಾಳ ನ್ಯಾಯಾಲಯಕ್ಕೆ ತೆರಳುವುದರಿಂದ ಮುಕ್ತಿ ದೊರೆತಂತಾಗಿದೆ. ನ್ಯಾಯಾಲಯಗಳ ಸ್ಥಾಪನೆಯ ಉದ್ದೇಶ ವ್ಯಾಜ್ಯಗಳು ಕಡಿಮೆ ಮಾಡುವುದಕ್ಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಾಗಬೇಕು ಎಂದರು.

ದಿವಾಣಿ ನ್ಯಾಯಾಧೀಶರು, ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂಪತ್​ಕುಮಾರ ಬಳೋಲಗಿಡದ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ರಾಜು ಮುಜುಮದಾರ ಉಪಸ್ಥಿತರಿದ್ದರು.

ಹಿರಿಯ ವಕೀಲರಾದ ಎಂ.ಎಚ್​. ಹಾಲಣ್ಣವರ, ವ್ಹಿ.ಎಂ. ನಾಗಠಾಣ, ಜೆ.ಎ. ಚಿನಿವಾರ, ಎಂ.ಎಸ್​. ನಾವದಗಿ, ಎಂ.ಎಂ. ಮುದ್ದೇಬಿಹಾಳ, ವಿಶ್ವನಾಥರಡ್ಡಿ ಮದರಕಲ್ಲ, ಎಸ್​.ಆರ್​. ಸಜ್ಜನ, ಎಸ್​.ಎಂ. ಗುಡದಿನ್ನಿ, ನ್ಯಾಯವಾದಿಗಳ ಸಂದ ಪ್ರಧಾನ ಕಾರ್ಯದರ್ಶಿ ಪಿ.ಬಿ. ಗೌಡರ, ವಕೀಲರಾದ ಎಂ.ಆರ್​. ಪಾಟೀಲ, ಆನಂದ ಮದರಕಲ್ಲ, ಆನಂದ ಕೊಂಗಡ್ಡಿ, ಆನಂದ ದೊಡಮನಿ, ಬಸನಗೌಡ ಮುಂದಿನಮನಿ, ಪ್ರಭಾಕರ ಗುಡಗುಂಟಿ, ಎಂ.ಎಚ್​. ಜೂಲಿ, ಸುರೇಶ ನಾರಿ, ಎಂ.ಎಸ್​. ಹಜೇರಿ, ಆರ್​.ಎಚ್​. ಇನಾಮದಾರ, ಎಸ್​.ಆರ್​. ದೇಸಾಯಿ, ಮುತ್ತು ಜಾಗೀರದಾರ, ಈರಪ್ಪ ಕುಂಬಾರ, ವ್ಹಿ.ಜಿ. ಮದರಕಲ್ಲ, ಎಸ್​.ಆರ್​. ಸಜ್ಜನ, ಎಂ.ಎಸ್​. ಅಮಲ್ಯಾಳ ಉಪಸ್ಥಿತರಿದ್ದರು.

ನ್ಯಾಯಾಧೀಶರಾದ ಶಿವಾಜಿ ಅನಂತ ನಲವಡೆ ಸ್ವಾಗತಿಸಿದರು. ಹಿರಿಯ ದಿವಾಣಿ ನ್ಯಾಯಾಧೀಶರಾದ ಲಕ್ಷ್ಮೀ ನಿಂಗಪ್ಪ ಗರಗ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net