ವಿದ್ಯಾರ್ಥಿ ಜೀವನದಲ್ಲಿಯೇ ಯುವಕರು ನಾಯಕತ್ವ ಗುಣ ಬೆಳೆಸಿಕೊಳ್ಳಲಿ

BILKODUGE
ಅಳವಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಹಾಗೂ ಇತರ ಚಟುವಟಿಕೆಗಳ ಸಮರೋಪ ಸಮಾರಂಭವನ್ನು ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಉದ್ಘಾಟಿಸಿದರು. ಟಿಎಚ್‌ಒ ಟಿ.ರಾಮಾಂಜನೇಯ, ಪ್ರಾಚಾರ್ಯ ಡಾ.ಗವಿಸಿದ್ದಪ್ಪ ಮುತ್ತಾಳ, ನಿವೃತ್ತ ಉಪನ್ಯಾಸಕರಾದ ಡಿ.ಜಿ.ಲಕ್ಕನಗೌಡರ, ಎ.ಟಿ.ಕಲ್ಮಠ, ಉಪನ್ಯಾಸಕರಾದ ನಾಗೇಂದ್ರಪ್ಪ, ಮಲ್ಲಿಕಾರ್ಜುನ, ಇಮಾಮ್‌ಸಾಬ್, ಜಗದೀಶ, ಬಸವರಾಜ ಇತರರು ಇದ್ದರು.
Published on

ಅಳವಂಡಿ: ವಿದ್ಯಾರ್ಥಿ ಜೀವನದಲ್ಲಿಯೇ ಯುವಕರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಇದು ನಿಮ್ಮನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡುತ್ತದೆ ಹಾಗೂ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ತಿಳಿಸಿದರು.

ಗ್ರಾಮದ ಶ್ರೀ ಶಿವಮೂರ್ತಿಸ್ವಾಮಿ ಇನಾಮದಾರ ಕಟ್ಟಿಮನಿ ಹಿರೇಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2022-23ನೇ ಶೈಕ್ಷಣಿಕ ವರ್ಷದ ಕ್ರೀಡೆ, ಎನ್ನೆಸ್ಸೆಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಇತರ ಘಟಕಗಳ ಸಮಾರೋಪ ಸಮಾರಂಭ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಒಂದು ಚಟವಾಗಿ ಪರಿಣಮಿಸಿದೆ. ಒಳ್ಳೆಯ ಕೆಲಸಗಳಿಗೆ ಮೊಬೈಲ್ ಬಳಕೆಯಾಗಬೇಕು. ವಿದ್ಯಾರ್ಥಿಗಳು ಓದಿಗೆ ಹೆಚ್ಚು ಒತ್ತು ನೀಡಬೇಕು. ನಾವು ನಡೆಯುವ ದಾರಿ ಬಗ್ಗೆ ನಿಖರ ಗುರಿ ಇರಬೇಕು. ಆಸಕ್ತಿಗೆ ತಕ್ಕ ವಿಷಯದಲ್ಲಿ ಮುನ್ನಡೆದು ಸಾಧಿಸಬೇಕು ಎಂದು ಸಲಹೆ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಟಿ.ರಾಮಾಂಜನೇಯ ಮಾತನಾಡಿ, ಯುವಕರು ಸಾಧಕರಾಗಿ ಜೀವನ ನಡೆಸಬೇಕು. ದುಶ್ಚಟಗಳು ಜೀವನವನ್ನು ನಾಶ ಮಾಡುತ್ತವೆ. ಈಗ ದುಶ್ಚಟಗಳಿಗೆ ದಾಸರಾದರೆ, ಭವಿಷ್ಯ ಶೂನ್ಯವಾಗಲಿದೆ. ಹೀಗಾಗಿ ಯೂವ ಸಮೂಹ ಕುಟುಂಬ ಹಾಗೂ ಸಮಾಜದ ವ್ಯವಸ್ಥೆಯಲ್ಲಿ ಬದುಕಬೇಕೆಂದರು.

ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಸಣ್ಣ ಕುಟುಂಬಗಳು ಜಾಸ್ತಿಯಾಗುತ್ತಿವೆ. ಸಮಾಜದಲ್ಲಿ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿವೆ. ಹಿರಿಯರು ಸಮಾಜವನ್ನು ಕಷ್ಟಪಟ್ಟು ಕಟ್ಟಿದ್ದು, ನಾವು ಸಮಾಜದ ಒಂದು ಭಾಗವಾಗಬೇಕು ಎಂದರು.

ಪ್ರಾಚಾರ್ಯ ಡಾ.ಗವಿಸಿದ್ದಪ್ಪ ಮುತ್ತಾಳ, ನಿವೃತ್ತ ಉಪನ್ಯಾಸಕರಾದ ಡಿ.ಜಿ.ಲಕ್ಕನಗೌಡರ, ಎ.ಟಿ.ಕಲ್ಮಠ, ಉಪನ್ಯಾಸಕರಾದ ನಾಗೇಂದ್ರಪ್ಪ, ಮಲ್ಲಿಕಾರ್ಜುನ, ಇಮಾಮ್‌ಸಾಬ್, ಜಗದೀಶ, ಗೋಣಿಬಸಪ್ಪ, ಮಲ್ಲೇಶ, ಬೋರಯ್ಯ, ಸಿದ್ದು, ರವಿ, ಪ್ರದೀಪ, ವೆಂಕಟೇಶ, ಈಶಪ್ಪ, ಬಸವರಾಜ ಕರುಗಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net