

ಅರಕೇರಾ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಬಡ ಹಾಗೂ ಮಧ್ಯಮ ವರ್ಗದ ಕೃಷಿಕರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿವೆ ಎಂದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಹೇಳಿದರು.
ಪಟ್ಟಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಬಾರ್ಡ್ ಬಹುಸೇವಾ ಕೇಂದ್ರ ಯೋಜನೆಡಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಗೋದಾಮು ಕಟ್ಟಡ ಉದ್ಘಾಟನೆ ಹಾಗೂ 2022-23 ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಪ್ರಾಕೃಪಸ ಸಂಘದ ಜಾಗ ಸಂಘದ ಹೆಸರಿನಲ್ಲಿರಲಿಲ್ಲ. ಇದೀಗ ಜಾಗ ಮತ್ತು ಗೋದಾಮು ಕಟ್ಟಡವನ್ನು ಸಂಘದ ಹೆಸರಿಗೆ ನೋಂದಣಿ ಮಾಡಿಸಲಾಗಿದೆ. ನಬಾರ್ಡ್ ಯೋಜನೆಯಡಿ ಗಬ್ಬೂರು, ಜಾಲಹಳ್ಳಿ, ದೇವದುರ್ಗದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಗೋದಾಮುಗಳನ್ನು ನಿರ್ಮಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಸಹಕಾರಿ ಕ್ಷೇತ್ರ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಭಿನ್ನವಾಗಿ ವ್ಯವಹಾರ ನಡೆಸುತ್ತಿವೆ. ಕೃಷಿಕರ ಅನುಕೂಲಕ್ಕಾಗಿ ಸ್ಥಾಪಿತವಾದ ಸಹಕಾರಿ ಸಂಸ್ಥೆಗಳು ಪ್ರಗತಿ ಸಾಧಿಸುತ್ತಿರುವುದಕ್ಕೆ ಸಹಕಾರಿಗಳೆಲ್ಲರೂ ಹೆಮ್ಮೆಪಡಬೇಕಾಗಿದೆ ಎಂದು ರಾಜಶೇಖರ ನಾಯಕ ತಿಳಿಸಿದರು.
ಟಿಎಪಿಸಿಎಂಎಸ್ ನಿರ್ದೇಶಕ ಚನ್ನವೀರಯ್ಯ ಸ್ವಾಮಿ ಹಿರೇಮಠ ಮಾತನಾಡಿ, ಪ್ರಾಕೃಪಸ ಸಂಘಗಳು ಜನರ ವಿಶ್ವಾಸಾರ್ಹತೆ ಗಳಿಸಿವೆ. ರೈತರಿಗೆ ಕೃಷಿ ಸಲುವಾಗಿ ಶೂನ್ಯ ಬಡ್ಡಿ ದರದಲ್ಲಿ ನೀಡುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಇದರಿಂದ ರೈತರಿಗೆ ಬಡ್ಡಿ ಹೊರೆ ಬೀಳುವುದಿಲ್ಲ ಎಂದರು.
ಸಂಘದ ಸಿಇಒ ಶಿವಕುಮಾರ ನಾಯಕ 2022-23ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಸಂಘದ ಅಧ್ಯಕ್ಷ ಕೆ.ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಂಗಣ್ಣ ತಾತ, ಆರ್‌ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ವೆಂಕಟೇಶ, ವೃತ್ತ ವೀಕ್ಷಕ ಮಹಿಬೂಬ್, ನಿರ್ದೇಶಕರಾದ ಪರಮೇಶ ಪೂಜಾರಿ, ಗಂಗಾಧರ ಪತ್ತಾರ, ಮಾನಪ್ಪ ಮುಕ್ಕಲಗುಡ್ಡತಾಂಡ, ರಾಮನಗೌಡ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಯಕ ಪೊ.ಪಾ, ಪ್ರಮುಖರಾದ ರಾಕೇಶಗೌಡ ಪೊ.ಪಾ., ಮುದುಕಪ್ಪ ನಾಯಕ, ಚಂದ್ರಶೇಖರ ಶೆಟ್ಟಿ, ಬಸವರಾಜ, ಸಿದ್ದಾರ್ಥ ಹವಲ್ದಾರ್ ಇತರರಿದ್ದರು.