ಜಿಲ್ಲೆಯ ಸಹಕಾರಿಗಳಲ್ಲಿದೆ ಆರ್ಥಿಕ ಶಿಸ್ತು

5mnv01
ಅಮರೇಗೌಡ ನಕ್ಕುಂದಿ
Published on

ಮಾನ್ವಿ: ಸೌಹಾರ್ದ ಸಹಕಾರಿ ನಿಯಮಗಳನ್ನು ತಿಳಿಯಲು ತರಬೇತಿ ಶಿಬಿರಗಳು ಅಗತ್ಯ ಎಂದು ಜಿಲ್ಲಾ ಸೌಹಾರ್ದ ಸಹಕಾರಿಗಳ ಸಂಘದ ಉಪಾಧ್ಯಕ್ಷ ಅಮರೇಗೌಡ ನಕ್ಕುಂದಿ ಹೇಳಿದರು.

ಪಟ್ಟಣದ ವಿರೂಪಾಕ್ಷೇಶ್ವರ ಸೌಹಾದರ್ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ಸೋಮವಾರ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.ಬೆಂಗಳೂರಿನಿಂದ ಜಿಲ್ಲೆಯ ಸಹಕಾರಿ ಸಂಘಗಳ ಸಿಇಒಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಜಿಲ್ಲೆಯ ಸಹಕಾರಿ ಸಂಘಗಳು ಸದಸ್ಯರಿಗೆ ಉತ್ತಮ ಹಣಕಾಸು ಸೇವೆ ನೀಡುವುದರೊಂದಿಗೆ ಆರ್ಥಿಕ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ಪ್ರಗತಿ ಹಾದಿಯಲ್ಲಿ ಸಾಗುತ್ತಿವೆ. ಸಹಕಾರಿಗಳ ಯಶಸ್ಸಿಗೆ ಸಂಸ್ಥೆಗಳ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ಸಹಕಾರವೇ ಕಾರಣ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿನ ವಿವಿಧ ಸೌಹಾರ್ದ ಸಹಕಾರಿಗಳು ಹೆಚ್ಚಿನ ಕ್ಷೇತ್ರಗಳಲ್ಲಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಲಿವೆ ಎಂದರು.

ಸೌಹಾರ್ದ ಸಹಕಾರಿಗಳ ಸಂಘದ ಪ್ರಾಂತೀಯ ವ್ಯವಸ್ಥಾಪಕ ಸೂರ್ಯಕಾಂತ ರ‌್ಯಾಟಲ್ ಮಾತನಾಡಿ, ಸಹಕಾರಿಗಳ ಯಶಸ್ಸಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪಾತ್ರ ಪ್ರಮುಖವಾಗಿರುತ್ತದೆ. ನಿಯಮಿತವಾಗಿ ಲೆಕ್ಕಪರಿಶೋಧನೆ ನಡೆಸುವ ಮೂಲಕ ಸಂಘದ ಪ್ರಗತಿ ಗುರುತಿಸಲು ಸಾಧ್ಯವಾಗುತ್ತದೆ. ಸಹಕಾರಿಯ ಅರ್ಹ ಮತದಾರರನ್ನು ಗುರುತಿಸಿ ಮತದಾರರ ಪಟ್ಟಿಯನ್ನು ತಯಾರಿಸಬೇಕು. ಶಾಸನಬದ್ಧ ಕರ್ತವ್ಯಗಳ ಕುರಿತು ತಿಳಿದಾಗ ಮಾತ್ರ ಸಹಕಾರಿ ಯಶಸ್ವಿಯಾಗಿ ಸಾಗಲು ಸಾಧ್ಯ ಎಂದರು. ಜಿಲ್ಲಾ ಸಂಯೋಜಕ ನಟರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net