

ಮಂಡ್ಯ: ಜಿಲ್ಲೆಯಲ್ಲಿ ಪೂರ್ಣಗೊಳಿಸಿರುವ ವಿವಿಧ ಕಾಮಗಾರಿಗೆ ಸಂಬಂಧಿಸಿದಂತೆ ಎಲ್‌ಒಸಿ ಹಣವನ್ನು ರಾಜ್ಯಸರ್ಕಾರ ಕೂಡಲೇ ಬಿಡುಗಡೆ ಮಾಡದಿದ್ದರೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಲಿದೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಎಂ.ಎಚ್.ಯತಿರಾಜು ಮತ್ತು ಪ್ರಧಾನ ಕಾರ್ಯದರ್ಶಿ ಕೆ.ರವೀಂದ್ರ, ಗುತ್ತಿಗೆದಾರರು ಈಗಾಗಲೇ ಕಾಮಗಾರಿಯನ್ನು ಮುಗಿಸಿದ್ದಾರೆ. ಆದರೂ ಪೂರ್ಣ ಪ್ರಮಾಣದ ಎಲ್‌ಒಸಿ ಪಾವತಿಯಾಗದೇ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಕಾಮಗಾರಿ ಪೂರ್ಣಗೊಳಿಸಲು ಮನೆ, ಸ್ಥಿರ ಮತ್ತು ಚರಾಸ್ಥಿಗಳನ್ನು ಅಡವಿಟ್ಟು ಬ್ಯಾಂಕಿನಿಂದ ಒಡಿ, ಕೈಸಾಲ, ಖಾಸಗಿ ಫೈನಾನ್ಸ್‌ಗಳಿಂದ ಸಾಲ ಪಡೆದಿದ್ದಾರೆ. ಆದರೆ ಸರ್ಕಾರ ಹಣ ಬಿಡುಗಡೆ ಮಾಡದ ಪರಿಣಾಮ ಬದುಕು ನಿರ್ವಹಣೆಗೆ ದೊಡ್ಡ ಸಮಸ್ಯೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರರ ವೈಯಕ್ತಿಕ ಸಮಸ್ಯೆಗಳಾದ ಆರೋಗ್ಯ, ಮಕ್ಕಳ ಶಿಕ್ಷಣ, ಕುಟುಂಬದ ನಿರ್ವಹಣೆ, ಆರ್ಥಿಕ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಹಿಂದೆ ರಾಜ್ಯ ಸಂಘದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಅಲ್ಪ ಮೊತ್ತದ ಹಣ ಬಿಡುಗಡೆಯಾಗಿತ್ತು. ಆದರೆ ಇದರಿಂದ ಬಡ್ಡಿ ಕಟ್ಟಲೂ ಸಾಧ್ಯವಾಗದಂತಾಗಿದೆ. ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯೊಂದರಲ್ಲಿಯೇ ಸುಮಾರು 300 ಕೋಟಿ ಹಾಗೂ ಇನ್ನುಳಿದ ಇಲಾಖೆಯಲ್ಲಿಯೂ ಅಂದಾಜು 300 ಕೋಟಿ ರೂ ಎಲ್‌ಒಸಿ ಬಿಡುಗಡೆಯಾಗಬೇಕು. ಈ ಸಂಬಂಧ ಈಗಾಗಲೇ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರ ಗಮನಕ್ಕೆ ಪತ್ರ ಹಾಗೂ ಖುದ್ದಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಆದಷ್ಟು ಬೇಗ ಎಲ್‌ಒಸಿ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಹಲವು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.