

ಕಾರವಾರ: ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ.ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಜಿಲ್ಲೆಯ 20 ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿವಿಧ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ಅಂಗನವಾಡಿಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಿದ್ದಾರೆ. ಎಲ್ಲರ ವರದಿಯನ್ನು ವಿಶ್ಲೇಷಿಸಿ ರಾಜ್ಯ ಪ್ರಾಧಿಕಾರಕ್ಕೆ ವರದಿ ನೀಡಲಾಗುವುದು ಎಂದರು.
2782 ಅಂಗನವಾಡಿಗಳಿದ್ದು, ಅವುಗಳಲ್ಲಿ 2112 ಸ್ವಂತ ಕಟ್ಟಡದಲ್ಲಿ, 41 ಪಂಚಾಯತ್ ಕಟ್ಟಡಗಳಲ್ಲಿ, 114 ಸಮುದಾಯ ಕಟ್ಟಡಗಳಲ್ಲಿ, 6 ಯುವಕ ಮಂಡಳಿಗಳಲ್ಲಿ, 1 ಮಹಿಳಾ ಮಂಡಳದಲ್ಲಿ, 171 ಶಾಲೆಗಳಲ್ಲಿ, 325 ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಬಾಡಿಕೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳಿಗೆ ಪ್ರತ್ಯೇಕ ಅಡುಗೆ ಕೋಣೆ ಇಲ್ಲ. ಆಹಾರ ಧಾನ್ಯ ಸಂಗ್ರಹಿಸುವ ವ್ಯವಸ್ಥೆ ಇಲ್ಲ. ಶೌಚಗೃಹ ಸ್ವಚ್ಛವಾಗಿಲ್ಲ. ಶೌಚಗೃಹ ಹಾಗೂ ಪಾತ್ರೆ ತೊಳೆಯುವ ಜಾಗ ಒಂದೇ ಆಗಿದೆ. ಅಂಥವನ್ನು ವರದಿ ಮಾಡಲಾಗುತ್ತಿದೆ. ಹೆಚ್ಚಿನ ಅಂಗನವಾಡಿಗಳಲ್ಲಿ ಶುದ್ಧ ಕುಡಿಯುವ ನೀರು ನೀಡುತ್ತಿಲ್ಲ. ಸಾಮಾನ್ಯ ನೀರನ್ನೇ ಬಿಸಿ ಮಾಡಿ ಕೊಡಲಾಗುತ್ತಿದೆ. ಉಳಿದ ಅಂಗನವಾಡಿಗಳಿಗೆ ಪೂರೈಸುವ ಆಹಾರಗಳು ಮತ್ತು ಸೌಕರ್ಯಗಳು ಉತ್ತಮವಾಗಿವೆ ಎಂದರು. ನಗರದ ಕೋಣೆವಾಡದ ಅಂಗನವಾಡಿ ಕೋಣೆನಾಲಾ ಪಕ್ಕದಲ್ಲಿದ್ದು, ವಾತಾವರಣ ಅನಾರೋಗ್ಯಕರವಾಗಿದೆ ಎಂದರು.
ಜು.13 ರಂದು ರಾಷ್ಟ್ರೀಯ ಲೋಕ ಅದಾಲತ್
ಜುಲೈ 13 ರಂದು ರಾಷ್ಟ್ರೀಯ ಲೋಕ್ ಅದಾಲತ್ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ನಡೆಯದೆ. 37,156 ಪ್ರಕರಣಗಳು ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇದ್ದು, ಅದರಲ್ಲಿ 11,662 ಪ್ರಕರಣಗಳು ಲೋಕ ಅದಾತ್ ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದಾದಂಥವಾಗಿವೆ. ಈಗಾಗಲೇ 2,152 ಪ್ರಕರಣಗಳು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಲು ಸಿದ್ದವಾಗಿದ್ದು, 20,804 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಲೋಕ ಅದಾಲತ್ ನಲ್ಲಿ ಬಗೆಹರಿಸಲು ಗುರುತಿಸಲಾಗಿದೆ ಎಂದು ದಿವ್ಯಶ್ರೀ ಸಿಎಂ ವಿವರಿಸಿದರು.