ಡಿಸಿಎಂ ಡಿಕೆಶಿ ಏಳಿಗೆ ಸಹಿಸದೇ ಜೆಡಿಎಸ್ ಆರೋಪ: ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ವಾಗ್ದಾಳಿ

District Congress Working President criticizes JDS mandya
Published on

ಮಂಡ್ಯ: ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ಜೆಡಿಎಸ್ ನಾಯಕರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಆರೋಪಿಸಿದರು.

ಡಿಕೆಶಿ ಏಳಿಗೆ ಸಹಿಸದೇ ಇಂತಹ ಕೆಲಸ ಮಾಡುತ್ತಿದ್ದಾರೆ. ಡಿಸಿಎಂ ವಿರುದ್ಧ ಪ್ರತಿಭಟನೆ ನಡೆಸುವ ನೈತಿಕತೆ ಜೆಡಿಎಸ್ ನಾಯಕರಿಗಿಲ್ಲ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಹಾಗೂ ಜೆಡಿಎಸ್ ಪಕ್ಷಕ್ಕೆ ಬಂದಿರುವ ಕಳಂಕ ಮರೆಮಾಚಲು ಇಂತಹ ಪಿತೂರಿ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಬರಗಾಲ ಹಾಗೂ ಬೆಳೆ ನಷ್ಟ ಪರಿಹಾರದ ಬಗ್ಗೆ ಎಂದಿಗೂ ಪ್ರತಿಭಟನೆ ನಡೆಸದ ಜೆಡಿಎಸ್, ಪೆನ್‌ಡ್ರೈವ್ ಪ್ರಕರಣವನ್ನು ಮರೆಮಾಚುವ ಸಲುವಾಗಿ ಈ ರೀತಿಯ ಪ್ರತಿಭಟನೆ ಮಾಡಿದ್ದಾರೆ. ಎಸ್‌ಐಟಿ ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದೆ. ತಪ್ಪಿತಸ್ಥರ ರಕ್ಷಣೆ ಮಾಡುವ ಕೆಲಸ ಮಾಡುತ್ತಿಲ್ಲ. ಸಿಬಿಐ ಕೇಂದ್ರದ ಬಿಜೆಪಿ ಕೈಯಲ್ಲಿದೆ. ಆದ್ದರಿಂದ ರಾಜ್ಯದ ತನಿಖಾ ತಂಡದಿಂದಲೇ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಪ್ರಜ್ವಲ್ ರೇವಣ್ಣ ಅವರನ್ನ ಕರೆತಂದು ಪೊಲೀಸರಿಗೆ ಒಪ್ಪಿಸುವ ಬದಲು, ಡಿಕೆಶಿ ನಾಯಕತ್ವವನ್ನ ಸಹಿಸದೇ ಪ್ರತಿಭಟನೆ ಮಾಡುತ್ತಿದೆ. ಒಕ್ಕಲಿಗ ನಾಯಕನ ಏಳಿಗೆ ಸಹಿಸಲು ಜೆಡಿಎಸ್‌ಗೆ ಆಗುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಮುಂದೆ ಜೆಡಿಎಸ್ ಇದೇ ರೀತಿ ವರ್ತಿಸಿದರೆ ಅವರ ವಿರುದ್ಧ ನಾವು ಕೂಡ ದೊಡ್ಡ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಚಿನಕುರುಳಿ ರಮೇಶ್, ಜಾರ್ಜ್ ಮೋಹನ್, ಕುಮಾರ್, ವೀಣಾ ಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net