

ರಾಯಚೂರು ದೇಶಾದ್ಯಂತ ನಡೆಯುತ್ತಿರುವ ಮತಗಳ್ಳತನವನ್ನು ವಿರೋಧಿಸಿ ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್ ನೇತೃತ್ವದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ಎಂಎಲ್ಸಿ ಎ.ವಸಂತ ಕುಮಾರ ಮಾತನಾಡಿ, ದೇಶದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘ ಪರಿವಾರದಿಂದ ಮತಗಳ್ಳತನ ಕೆಲಸ ಮಾಡುತ್ತಿದೆ. ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿ ಅವರು ಹೋರಾಟ ನಡೆಸಿ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಪರಿಶೀಲನೆ ನಡೆಸದೇ ಯಾವುದೇ ಮತಗಳ್ಳತನ ನಡೆದಿಲ್ಲವೆಂದು ಹೇಳಿದ್ದರಿಂದ ರಾಹುಲ್ ಗಾಂಧಿ ಅವರು ದೇಶದಲ್ಲಿ ವಿವಿಧ ವಿಧಾನ ಸಭಾವಾರು ಮತಗಳ್ಳತನ ಬಗ್ಗೆ ದಾಖಲೆ ಸಮೇತ ದೂರು ನೀಡಿದ್ದರಿಂದ ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ ಎಂದರು.
ದೇಶದಲ್ಲಿ ಕಾಂಗ್ರೆಸ್ ಗೆಲ್ಲಬಹುದಾದ ಕಡೆಗಳಲ್ಲಿ ಕಾಂಗ್ರೆಸ್‌ನ ಮತದಾರರ ಹೆಸರನ್ನು ಡಿಲೀಟ್ ಮಾಡಿಸಿದ್ದು ಜತೆಗೆ ಅಕ್ರಮವಾಗಿ ಮತದಾರರ ಹೆಸರನ್ನು ಸೇರ್ಪಡೆ ಮಾಡುವ ಕುತಂತ್ರ ಕೆಲಸ ಮಾಡಿದ್ದಾರೆ. ಅಕ್ರಮವಾಗಿ ಸೇರ್ಪಡೆ ಮಾಡಿದ್ದರ ಕುರಿತು ದಾಖಲೆ ನೀಡಬೇಕು. ಮತ ಹೆಸರು ಪಟ್ಟಿಯಿಂದ ಕೈಬಿಡಲು ದಾಖಲೆ ಕೊಡಬೇಕು ಎಂದು ಆಯೋಗ ಅದೇಶಿಸಿದೆ. ದೇಶದಲ್ಲಿ ನಡೆಯುತ್ತಿರುವ ಅಕ್ರಮ ಮತಗಳ್ಳತನವನ್ನು ಬಯಲಿಗೆ ತಂದು ರಾಹುಲ್ ಗಾಂಧಿ ಅವರು ದೇಶಾದ್ಯಂತ ಅಭಿಯಾನ ನಡೆಸುತ್ತಿದ್ದಾರೆ. ಸಹಿ ಸಂಗ್ರಹ ಅಭಿಯಾನದ ಮೂಲಕ ಆಯೋಗಕ್ಕೆ ಸಲ್ಲಿಸುವ ಕೆಲಸ ಮಾಡಲಾಗುವುದು ಎಂದರು.
ಶಾಸಕ ದದ್ದಲ್ ಬಸನಗೌಡ ಮಾತನಾಡಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಮತಗಳ್ಳತನ ಕೆಲಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಾರದಂತೆ ಕುತಂತ್ರ ನಡೆಸಿದೆ. ಮತಗಳ್ಳತನ ಕುರಿತು ರಾಹುಲ್ ಗಾಂಧಿ ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ನೀಡಿದ್ದು ಇದೀಗ ಎಚ್ಚೆತ್ತುಕೊಂಡಿದೆ. ವಿಧಾನಸಭಾವಾರು ಅಕ್ರಮವಾಗಿ ಸೇರ್ಪಡೆ ಮಾಡಿದ ಮತದಾರರ ಹೆಸರನ್ನು ಡಿಲೀಟ್ ಮಾಡಬೇಕು. ಮತದಾರರ ಪಟ್ಟಿಯಿಂದ ಕೈಬಿಟ್ಟ ಹೆಸರನ್ನು ಸೇರ್ಪಡೆ ಮಾಡುವ ಕೆಲಸ ಬಿಎಲ್‌ಒಗಳು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ ಇಟಗಿ, ಶರಣಪ್ಪ ಮಟ್ಟೂರು, ಕೆ.ಶಾಂತಪ್ಪ, ರಾಜಶೇಖರ ರಾಮಸ್ವಾಮಿ, ಪಾಮಯ್ಯ ಮುರಾರಿ, ಡಾ.ರಝಾಕ ಉಸ್ತಾದ, ಕೆ.ಅಸ್ಲಂ ಪಾಶಾ, ಅಬ್ದುಲ್ ಕರೀಂ, ಆಂಜನೇಯ ಕುರುಬದೊಡ್ಡಿ, ಡಿ.ಕೆ.ಮುರಳಿ ಯಾದವ, ನಿರ್ಮಲಾ ಬೆಣ್ಣೆ, ಅಸ್ಲಾಂ ಪಾಷಾ,ಅಮರೇಗೌಡ ಹಂಚಿನಾಳ, ಶಂಶುದ್ದೀನ್, ಅಬ್ದುಲ್ ಅಜೀಜ್ , ಗೋವಿಂದ ನಾಯಕ ಗುರುಗುಂಟಾ, ಅನಿಲ್ ಕುಮಾರ, ಮಲ್ಲಿಕಾರ್ಜುನ ಮಟಮಾರಿ, ನಾಗೇಂದ್ರಪ್ಪ ಮಟಮಾರಿ ಸೇರಿ ಅನೇಕರು ಇದ್ದರು.