ಸಂಸದ ಪ್ರತಾಪ್‌ಸಿಂಹರನ್ನು ವಿಚಾರಣೆಗೊಳಪಡಿಸಿ: ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ ಆಗ್ರಹ

District Congress press conference against BJP Mandya
Published on

ಮಂಡ್ಯ: ಲೋಕಸಭೆಯಲ್ಲಿ ಭದ್ರತಾ ಲೋಪವಾಗಿರುವುದರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಉತ್ತರಿಸಬೇಕು. ಅಂತೆಯೇ ಸದನಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ ಯುವಕರಿಗೆ ಪಾಸ್ ನೀಡಿದ ಆರೋಪದ ಮೇಲೆ ಸಂಸದೆ ಪ್ರತಾಪ್‌ಸಿಂಹ ಅವರನ್ನು ವಿಚಾರಣೆಗೊಳಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ ಒತ್ತಾಯಿಸಿದರು.

ಘಟನೆ ಸಂಬಂಧ ನ್ಯಾಯ ಕೇಳಿ ಹೋರಾಟ ನಡೆಸಿದ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ಸಂಸದರನ್ನು ಅಮಾನತುಗೊಳಿಸಿರುವುದು ಖಂಡನೀಯ. ಪಾಸ್ ಕೊಟ್ಟ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಪ್ರಶ್ನಿಸಿದ ಸಂಸದರನ್ನು ಅಮಾನತುಗೊಳಿಸಿರುವುದು ಯಾವ ನ್ಯಾಯ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸರ್ವಾಧಿಕಾರಿ ಧೋರಣೆ ತಳೆದಿರುವುದು ಸ್ಪಷ್ಟವಾಗುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೇ? ಅಥವಾ ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿದೆಯೇ ಎಂಬ ಆತಂಕ ಕಾಡುತ್ತಿದೆ. ನ್ಯಾಯ ಕೇಳಿದ ಸಂಸದರ ಪರಿಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಪಾಡೇನು. ಸದನಕ್ಕೆ ನುಗ್ಗಿ ಗಲಾಟೆ ಮಾಡಿದ ಯುವಕರಲ್ಲಿ ಯಾರಾದರೊಬ್ಬರು ಮುಸ್ಲಿಂ ವ್ಯಕ್ತಿಯಾಗಿದ್ದರೆ ಅಥವಾ ಕಾಂಗ್ರೆಸ್ ಸಂಸದರಾದ ಡಿ.ಕೆ.ಸುರೇಶ್ ಪಾಸ್ ವ್ಯವಸ್ಥೆ ಮಾಡಿಕೊಟ್ಟಿದ್ದರೆ ಇಷ್ಟೊತ್ತಿಗಾಗಲೇ ದೇಶದಲ್ಲಿ ಅಲ್ಲೋಲ, ಕಲ್ಲೋಲ ಆಗುತ್ತಿತ್ತು ಎಂದು ಟೀಕಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್, ಮುಖಂಡರಾದ ಕೃಷ್ಣಮೂರ್ತಿ, ವೆಂಕಟೇಶ್, ಶಾಂಭವಿ, ಸುಧಾ, ಬಿ.ಪಿ.ರಾಧಾಮಣಿ, ಎಚ್.ಆರ್.ಭಾಗ್ಯಮ್ಮ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net