ಹೈಕಮಾಂಡ್ ಸಂತೃಪ್ತಿಪಡಿಸಲು ಬಿಜೆಪಿಗರ ಟೀಕೆ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ವಾಗ್ದಾಳಿ

District Congress President Press Conference Mandya
Published on

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಗ್ಯಾರಂಟಿ ಅನುಷ್ಠಾನ ನಿರಂತರ ಎಂಬ ಸಂದೇಶ ನೀಡುವ ಮೂಲಕ ವಿಪಕ್ಷಗಳ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಆದರೆ ಬಿಜೆಪಿ ನಾಯಕರು ತಮ್ಮ ಹೈಕಮಾಂಡ್ ಸಂತೃಪ್ತಿಪಡಿಸುವ ಏಕಮೇವ ಉದ್ದೇಶದಿಂದ ನಾಲಗೆ ನಿಯಂತ್ರಣವಿಲ್ಲದೇ ಟೀಕಾ ಪ್ರಹಾರ ನಡೆಸುವುದು ಸಾಂವಿಧಾನಿಕ ಹುದ್ದೆಯ ಘನತೆಗೆ ತಕ್ಕದ್ದಲ್ಲ ಎಂದು ಮೈಷುಗರ್ ಅಧ್ಯಕ್ಷರೂ ಆದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ವಾಗ್ದಾಳಿ ನಡೆಸಿದರು.

ಸದಾ ಅಧಿಕಾರಕ್ಕೆ ಹಪಾಹಪಿಸುವ ರಾಜ್ಯ ಬಿಜೆಪಿ ನಾಯಕರು, ದೆಹಲಿ ಮುಖ್ಯಮಂತ್ರಿ ಕಾರ್ಯಾಲಯದಲ್ಲಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಭಗತ್‌ಸಿಂಗ್ ಭಾವಚಿತ್ರವನ್ನು ತೆರವುಗೊಳಿಸಿರುವ ಬಗ್ಗೆ ಮೊದಲು ಮಾತನಾಡಲಿ ಎಂದು ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ 53,117 ಕೋಟಿ ರೂ ಅನುದಾನ ನೀಡುವ ಮೂಲಕ ನೈಜ್ಯ ರೈತನ ಮಗ ಎಂಬುವುದನ್ನು ತೋರಿಸಿದ್ದಾರೆ. ಅನ್ನಭಾಗ್ಯ, ಅಂಬೇಡ್ಕರ್ ಅಭಿವೃದ್ದಿ ನಿಗಮದ ಸಾಲಮನ್ನಾ, ಗೃಹಲಕ್ಷ್ಮೀ, ವಿದ್ಯುತ್ ಹಾಗೂ ಉಚಿತ ಬಸ್ ಸೌಲಭ್ಯ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮವನ್ನು ಜಾರಿಗೊಳಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದಲ್ಲದೆ ದಲಿತ ಸಮುದಾಯದ ಎಡಗೈ ಮತ್ತು ಬಲಗೈ ಜಾತಿಗೆ ಅನ್ಯಾಯವಾಗದಂತೆ ಮೀಸಲಾತಿ ಜಾರಿಗೊಳಿಸಲು ನಾಗಮೋಹನ್‌ದಾಸ್ ಅವರ ನೇತೃತ್ವದಲ್ಲಿ ಆಯೋಗ ರಚಿಸಿದ್ದು, ಆಯೋಗದ ಶಿಫಾರಸು ಸಲ್ಲಿಕೆ ನಂತರ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಇನ್ನು ವಿ.ಸಿ.ಫಾರ್ಮ್‌ನಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾನಿಲಯ ಆರಂಭಿಸುವ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ದೂರದೃಷ್ಠಿಗೆ ವಿರೋಧದ ಮಾತನಾಡುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಹೇಳಿಕೆ ಸರಿಯಲ್ಲ. ಜಿಲ್ಲೆಯ ಜನರನ್ನು ಭಾವನೆಗಳ ಮೂಲಕ ಕಟ್ಟಿ ಹಾಕಿ ಮತ ಸೆಳೆಯುವ ಜೆಡಿಎಸ್ ವರಿಷ್ಠರು, ಅಭಿವೃದ್ದಿಗೆ ಭಂಗ ತರುವ ಕೊಂಕು ಮಾತನಾಡುವುದು ಎಷ್ಟು ಸರಿ. ಪಂಚ ಗ್ಯಾರಂಟಿ ಸೇರಿದಂತೆ ಹಲವು ಸರ್ಕಾರಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿರುವ ವೇಳೆಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ತಪ್ಪು ಮಾಹಿತಿ ನೀಡಿ ಪ್ರಚೋದನಾ ಹೇಳಿಕೆ ಮೂಲಕ ಜನರನ್ನು ಎತ್ತಿ ಕಟ್ಟುವ ರಾಜಕಾರಣಕ್ಕೆ ಮುಂದಾಗಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದ್ದಾರೆ.

ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಸುಂಡಹಳ್ಳಿ ಮಂಜುನಾಥ್, ಎನ್.ಆರ್.ಚಂದ್ರಶೇಖರ್, ಸಿ.ಎಂ.ದ್ಯಾವಪ್ಪ, ಚಂದಗಾಲು ವಿಜಯ್‌ಕುಮಾರ್, ಸಾತನೂರು ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net