

ರಾಯಚೂರು ಕಾಂಗ್ರೆಸ್ ಪಕ್ಷದ ನಾಯಕರ ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹಾಗೂ ವಿರೋಧ ಪಕ್ಷದ ಸಂಚೇತಕ ಎಸ್.ರವಿಕುಮಾರ ಸದಸ್ಯತ್ವ ರದ್ದು ಪಡಿಸುವಂತೆ ಒತ್ತಾಯಿಸಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮಾಡಿದರು.
ನಗರದ ಬಿ.ಆರ್ ಅಂಬೇಡ್ಕರ ವೃತ್ತದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಚಲವಾದಿ ನಾರಾಯಣಸ್ವಾಮಿ ಮತ್ತು ಎಸ್. ರವಿಕುಮಾರರ ಭಾವಚಿತ್ರ ದಹನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಮಾತನಾಡಿ, ಬಿಜೆಪಿ ನಾಯಕರಿಗೆ ಯಾವ ರೀತಿ ಮಾತನಾಡಬೇಕೆನ್ನುವ ಜ್ಞಾನವಿಲ್ಲ. ಸಚಿವ ಪ್ರಿಯಾಂಕ ಖರ್ಗೆ ಮತ್ತು ಗುಲ್ಬರ್ಗ ಜಿಲ್ಲಾಧಿಕಾರಿಗಳ ವಿರುದ್ಧ ಚಲವಾದಿ ನಾರಾಯಣಸ್ವಾಮಿ ಮತ್ತು ಎಸ್. ರವಿಕುಮಾರ ಮಾತುಗಳು ಅತ್ಯಂತ ಖಂಡನೀಯವಾಗಿವೆ. ಎಸ್.ರವಿಕುಮಾರ ಹೇಳಿಕೆ ಬಗ್ಗೆ ನ್ಯಾಯಾಲಯ ಕಟುವಾಗಿ ಟೀಕಿಸುವ ಮೂಲಕ ಬಹಿರಂಗ ಕ್ಷಮಾಪಣೆಗೆ ಸೂಚಿಸಿದೆ.
ಚಲವಾದಿ ನಾರಾಯಣಸ್ವಾಮಿಯವರ ಕೀಳು ಮಟ್ಟದ ಮತ್ತು ಅತ್ಯಂತ ಕೆಟ್ಟ ಸಂಸ್ಕೃತಿಯ ಮನಸ್ಥಿತಿಯ ಹೇಳಿಕೆ ಹಿನ್ನೆಲೆಯಲ್ಲಿ ಅವರ ವಿಧಾನ ಪರಿಷತ್ ಸದಸ್ಯ ಸ್ಥಾನ ರದ್ದು ಪಡಿಸುವಂತೆ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಬಿಜೆಪಿ ನಾಯಕರು ಸಮಾಜದಲ್ಲಿ ಗಲಭೆ ಸೃಷ್ಟಿಸುವ ಕೆಲಸ ಮತ್ತು ಅಶಾಂತಿಗೆ ಕಾರಣವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಎಂಎಲ್ಸಿ ಎ.ವಸಂತ ಕುಮಾರ, ಶಾಸಕರಾದ ಬಸನಗೌಡ ದದ್ದಲ್,ಹಂಪನಗೌಡ ಬಾದರ್ಲಿ,ಎಂಲ್ಸಿ ಶರಣಗೌಡ ಬಯ್ಯಪುರ, ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ ಇಟಿಗಿ, ಕೆ ಶಾಂತಪ್ಪ, ಜಯಣ್ಣ, ಜಿ ಶಿವಮೂರ್ತಿ, ಆರ್.ಡಿ.ಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ರುದ್ರಪ್ಪ ಅಂಗಡಿ, ಅಬ್ದುಲ್ ಕರೀಂ, ಅಸ್ಲಾಂ ಪಾಷಾ, ಬಸವರಾಜ್ ಪಾಟೀಲ್ ದರೂರ,ತಾಯಣ್ಣ ನಾಯಕ, ನಿರ್ಮಲ ಬೆಣ್ಣೆ,ಅಮರೇಗೌಡ ಅಂಚಿನಾಳ, ಮುರಳಿ ಯಾದವ,ಹನುಮಂತು ಸೇರಿದಂತೆ ಅನೇಕರು ಇದ್ದರು.