

ವಿಜಯವಾಣಿ ವಿಶೇಷ ಬೆಳಗಾವಿ
ಜಿಲ್ಲಾಧಿಕಾರಿ ಆವರಣ ಇದೀಗ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ಇದರಿಂದ ನಿತ್ಯ ಕಚೇರಿ ಕೆಲಸಕ್ಕೆಂದು ಬರುವವರಿಗೆ ಪಾರ್ಕಿಂಗ್ ಹಾಗೂ ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಇದು ಡಿಸಿ ಆವರಣವೋ...ಪಾರ್ಕಿಂಗ್ ಸ್ಥಳವೋ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಡಿಸಿ ಕಚೇರಿ ಆವರಣದಲ್ಲಿ ಬಹಳಷ್ಟು ಜನರು ಬೆಳಗ್ಗೆ ವಾಹನಗಳನ್ನು ಪಾರ್ಕ್ ಮಾಡಿ ಸಂಜೆವರೆಗೆ ಬಿಡುತ್ತಾರೆ. ಕಚೇರಿ ಕೆಲಸಗಳಿಗೆಂದು ಬರುವ ಜನರಿಗೆ ವಾಹನ ಪಾರ್ಕಿಂಗ್ ಮಾಡುವುದಕ್ಕೆ ಸಮಸ್ಯೆಯಾಗುತ್ತಿದೆ. ಈ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಮರ್ಪಕ ರಸ್ತೆ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇರಲಿಲ್ಲ. ನಾಗರಿಕರ ಒತ್ತಾಯದ ಮೇರೆಗೆ ಹಿಂದಿನ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ರಸ್ತೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ಆವರಣವನ್ನು ಹೈಟೈಕ್ ಮಾಡಿದ್ದರು. ಆದರೆ, ಖಾಸಗಿ ವಾಹನ ಮಾಲೀಕರ ಅಡ್ಡೆಯಾಗಿ ಮಾರ್ಪಡುತ್ತಿದೆ. ಜಿಲ್ಲಾಡಳಿತ ಪೊಲೀಸರಿಗಾದರೂ ಸೂಕ್ತ ನಿರ್ದೇಶನ ನೀಡಿ, ಕಚೇರಿ ಕೆಲಸಗಳಿಗೆ ಬರುವವರಿಗಷ್ಟೇ ಇಲ್ಲಿ ವಾಹನ ಪಾರ್ಕಿಂಗ್ ಅವಕಾಶ ಕಲ್ಪಿಸಬೇಕು ಎಂದು ಜನರ ಆಗ್ರಹವಾಗಿದೆ.
ಸೌಲಭ್ಯ ಸದ್ಭಳಕೆಯಾಗಲಿ: ಆವರಣದಲ್ಲಿ ಸುಸಜ್ಜಿತ ವಾಹನ ಪಾರ್ಕಿಂಗ್, ಹಿರಿಯ ನಾಗರಿಕರಿಗೆ ಮರದ ಕೆಳಗೆ ಕುಳಿತುಕೊಳ್ಳುವುದಕ್ಕೆ ಆಸನ, ಗೂಡಂಗಡಿಗಳಿಗೆ ಹಾಗೂ ಪ್ರತಿಭಟನೆಗೂ ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ. ಜತೆಗೆ ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆಯೂ ಕಲ್ಪಿಸಲಾಗಿದೆ. ಆವರಣದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಹೀಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿ ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ಮಾದರಿಯಾಗಿ ನಿರ್ಮಿಸಿದ್ದಾರೆ. ಈ ಎಲ್ಲ ಸೌಲಭ್ಯ, ಸೌಕರ್ಯಗಳು ಜಿಲ್ಲಾಧಿಕಾರಿ ಕಚೇರಿಗೆ ಬರುವ ಜನರಿಗೆ ತಲುಪಬೇಕು ಎಂ ಆಶಯ ಜನರದ್ದು. ಖಾಸಗಿ ಪಾರ್ಕಿಂಗ್ ಪ್ರದೇಶಗಳಲ್ಲಿ 300 ರೂ.ವರೆಗೆ ಶುಲ್ಕವಿದೆ. ಹೀಗಾಗಿ ನಗರಕ್ಕೆ ಸಂತೆ, ವ್ಯಾಪಾರ-ವಹಿವಾಟಿಗೆಂದು ಬಂದವರು ಡಿಸಿ ಕಚೇರಿ ಆವರಣದಲ್ಲಿ ವಾಹನ ಪಾರ್ಕ್ ಮಾಡಿ ಹೊರಟಿದ್ದಾರೆ. ಸಂಚಾರ ದಟ್ಟನೆಯೂ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳ ಪಾರ್ಕಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿ ಕಚೇರಿಗೆ ಕೆಲಸ-ಕಾರ್ಯಗಳಿಗೆ ಬರುವ ಜನರಿಗೆ ವಾಹನಗಳ ಪಾರ್ಕಿಂಗ್ ಅನುಕೂಲ ಆಗಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಪೊಲೀಸರಿಗೆ ನಿರ್ದೇಶನ ನೀಡುತ್ತೇವೆ. ವಿಜಯಕುಮಾರ್ ಹೊನಕೇರಿ, ಅಪರ ಜಿಲ್ಲಾಧಿಕಾರಿ ಬೆಳಗಾವಿ ಕೋಟ್ಯಂತರ ರೂ. ವ್ಯಯಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಸ್ತೆ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಚೇರಿ ಕೆಲಸ ಹೊರತುಪಡಿಸಿ ಬೇರೆ, ಬೇರೆ ಉದ್ದೇಶಕ್ಕೆ ಬರುವವರು ಇಲ್ಲಿ ವಾಹನ ಪಾರ್ಕ್ ಮಾಡುತ್ತಿದ್ದಾರೆ. ಅದು ನಿಲ್ಲಬೇಕು. ಕಚೇರಿ ಕೆಲಸಗಳಿಗೆ ಬರುವ ಜನರಿಗೆ ಈ ಸೌಲಭ್ಯ ಮುಟ್ಟಬೇಕು. ಸಂಜಯ್ ಹಲಕರ್ಣಿ, ನಗರ ನಿವಾಸಿ --
ಫೋಟೋ: 12 ಜಗ್ಗು 3
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೇಕಾಬಿಟ್ಟಿ ವಾಹನ ಪಾರ್ಕಿಂಗ್‌ನಿಂದ ಸಂಚಾರ ದಟ್ಟನೆಯಾಗಿರುವುದು.
ಫೋಟೋ: 12 ಜಗ್ಗು 3ಎ
ವಿಜಯಕುಮಾರ್ ಹೊನಕೇರಿ